ಮಂಗಳೂರು: ಮಳೆ ತೀವ್ರವಾಗಿರುವ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದರೂ ಅಪಾಯ ಲೆಕ್ಕಿಸದೇ ಮೀನುಗಾರಿಕೆ ನಡೆಸುತ್ತಿದ್ದ ಯುವಕನ ಬೋಟ್‌ವೊಂದು ಮುಳುಗಡೆಯಾಗಿದ್ದು ಆತನನ್ನು ರಕ್ಷಿಸಲಾಗಿದೆ. ಮಂಗಳೂರು ಹೊರವಲಯದ ಹರೇಕಳದಲ್ಲಿ ಘಟನೆ ನಡೆದಿದ್ದು, ರೆಡ್ ಅಲರ್ಟ್ ನಡುವೆಯೂ ಯುವಕ ಮೀನುಗಾರಿಕೆ ನಡೆಸುತ್ತಿದ್ದ ಎನ್ನಲಾಗಿದೆ.
ಈ ವೇಳೆ ದೋಣಿ ಮಗುಚಿಬಿದ್ದು ಭಾರೀ ಅವಘಡ ಸಂಭವಿಸಿದೆ. ಹರೇಕಳ- ಅಡ್ಯಾರ್ ಸೇತುವೆಯ ಕೆಳಭಾಗ ನೇತ್ರಾವತಿ ನದಿಯಲ್ಲಿ ಘಟನೆ ನಡೆದಿದ್ದು, ನಿರಂತರವಾಗಿ ಸುರಿದ ಮಳೆಯಿಂದಾಗಿ ನೀರಿನ ಹರಿವು ನದಿಯಲ್ಲಿ ಹೆಚ್ಚಾಗಿತ್ತು.
ನೀರಿನ ರಭಸಕ್ಕೆ ದೋಣಿ ಏಕಾಏಕಿ ಮಗುಚಿಬಿದ್ದಿದೆ. ತಕ್ಷಣ ಸ್ಥಳದಲ್ಲಿದ್ದ ಯುವಕರ ತಂಡ ಸೇತುವೆ ಮೇಲಿನಿಂದ ನದಿಗೆ ಹಗ್ಗ ಇಳಿಸಿ ಮೇಲಕ್ಕೆತ್ತಿದ್ದಾರೆ. ದೋಣಿ ನೀರುಪಾಲಾಗಿದ್ದು, ರಕ್ಷಣೆಯ ವೀಡಿಯೋ ವೈರಲ್ ಆಗಿದೆ.