ಮಂಗಳೂರು: ಅಭಿವೃದ್ಧಿ ಜತೆಗೆ ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದು ಪರಿಸರ ಪ್ರೇಮಿ ಮಾಧವ ಉಳ್ಳಾಲ ಹೇಳಿದರು. ಶನಿವಾರ ಶಕ್ತಿ ನಗರ ಕುವೆಂಪು ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಕೃತಿ ಫುಡ್ಸ್ ವತಿಯಿಂದ ಆಯೋಜಿಸಿದ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಿಡ ಬೆಟ್ಟರೆ ಸಾಲದು ಅದಕ್ಕೆ ಪ್ರೀತಿ ಕೊಡುವ ಕೆಲಸವೂ ಆಗಬೇಕು. ಈಗ ಪ್ರೀತಿಯಿಂದ ಸಾಕಿದರೆ ಮುಂದೆ ಜೀವ ಜಂತುಗಳಿಗೆ ಆಶ್ರಯ ತಾಣವಾಗಲಿದೆ. ಪಾರಂಪರಿಕ ಗಿಡಮರಗಳನ್ನು, ಔಷಧೀಯ ಗಿಡಗಳನ್ನು ಹೆಚ್ಚು ಬೆಳೆಸಿ, ಉಳಿಸೋಣ ಎಂದರು.
ಸಾವಯವ ಕೃಷಿಕ ಹರಿಕೃಷ್ಣ ಕಾಮತ್ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ನಾವು ಪ್ರಕೃತಿಗೆ ಕೊಡಬಹುದಾದ ಮತ್ತೊಂದು ಕೊಡುಗೆ. ವಿಷಮುಕ್ತ ಆಹಾರ ಬಳಸಿ ರೋಗಗಳಿಂದ ದೂರವಿರೋಣ. ನಮ್ಮ ಆಹಾರವನ್ನು ನಾವೇ ಬೆಳೆಸೋಣ ಎಂದರು. ಪದವು ಫ್ರೆಂಡ್ಸ್ ಕ್ಲಬ್‌ನ ಕುಶಲ್ ಕುಮಾರ್, ಕಾರ್ಪೋರೇಟರ್ ವನಿತಾ ಪ್ರಸಾದ್, ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ವೀರೇಶ್, ಪ್ರಕೃತಿ ಫುಡ್ಸ್ ನ ಪ್ರಕಾಶ್ ಪ್ರಭು ಮತ್ತು ಅಶ್ವಿನಿ ಪ್ರಭು ಮತ್ತಿತರರು ಉಪಸ್ಥಿತರಿದ್ದರು.