ನವದೆಹಲಿ: ಶಿವಮೊಗ್ಗ ತುಂಗಾತೀರದಲ್ಲಿ ಸಂಭವಿಸಿದ್ದ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಐಎಸ್ ಉಗ್ರಗಾಮಿ ಕೃತ್ಯಕ್ಕೆ ಸಂಬಂಧಿಸಿ ಒಂಭತ್ತು ಮಂದಿ ವಿರುದ್ಧ ಎನ್ ಐಎ ಚಾರ್ಜ್ ಶೀಟ್ ಪ್ರಕಟಿಸಿದೆ. ವಿಚಾರಣೆ ವೇಳೆ, ವಿದೇಶದಲ್ಲಿರುವ ಐಸಿಸ್ ಉಗ್ರರ ಜೊತೆ ನೇರ ಸಂಪರ್ಕದಲ್ಲಿದ್ದ ವಿಚಾರ ತಿಳಿದುಬಂದಿದೆ. ಅಲ್ಲದೆ, ಭವಿಷ್ಯದ ಭಯೋತ್ಪಾದಕ ಚಟುವಟಿಕೆಗೆ ಸಿದ್ಧರಾಗುವಂತೆ ಆರೋಪಿಗಳಿಗೆ ಸೂಚಿಸಿದ್ದ ಐಸಿಸ್ ಹ್ಯಾಂಡ್ಲರ್, ರೋಬೋಟಿಕ್ ಕೋರ್ಸ್ ಓದುವಂತೆ ನಿರ್ದೇಶನ ನೀಡಿದ್ದ ಎನ್ನುವ ಸ್ಫೋಟಕ ಮಾಹಿತಿಯನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಆರೋಪಿಗಳಿವರು: ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸಿನ್, ರೀಶಾನ್ ತಾಜುದ್ದೀನ್ ಶೇಖ್, ಹುಜೈರ್ ಫರ್ಹಾನ್ ಬೇಗ್, ಮಜಿನ್ ಅಬ್ದುಲ್ ರಹಮಾನ್, ನದೀಮ್ ಅಹ್ಮದ್ ಕೆ ಎ, ಜಬೀವುಲ್ಲಾ ಮತ್ತು ನದೀಮ್ ಫೈಜಲ್ ಎನ್ ವಿರುದ್ಧ ಯುಎ(ಪಿ) ಕಾಯ್ದೆ 1967 ಮತ್ತು ಕೆಎಸ್ ಐಪಿಸಿ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಎನ್ ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಟ್ರಯಲ್: ಆರೋಪಿಗಳು ಶಿವಮೊಗ್ಗದಲ್ಲಿ ಐಇಡಿ ಸ್ಫೋಟದ ಟ್ರಯಲ್ ನಡೆಸಿದ್ದರು. ಭಾರತ ಮತ್ತು ದೇಶದ ವಿರುದ್ಧ ಯುದ್ಧಸಾರಿ ಎಂಬ ಐಎಸ್ ಕಾರ್ಯತಂತ್ರದ ಅಂಗವಾಗಿ
ಆಸ್ತಿಪಾಸ್ತಿ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಜನರಲ್ಲಿ ಭಯ ಹುಟ್ಟಿಸಲು ಭಯೋತ್ಪಾದನೆ ಮತ್ತು ಹಿಂಸಾಚಾರದ ಘಟನೆಗಳನ್ನು ನಡೆಸಿದ್ದರು ಎಂದು ಅಧಿಕಾರಿಗಳು ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ. ಮಾಜ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸಿನ್ ವಿರುದ್ಧ ಮಾರ್ಚ್‌ನಲ್ಲಿಯೂ ಆರೋಪ ಪಟ್ಟಿ ಸಲ್ಲಿಸಲಾಗಿತ್ತು ಎಂದು ಎನ್‌ಐಎ ತಿಳಿಸಿದೆ.
ಒಂಬತ್ತು ಮಂದಿಯಲ್ಲಿ, ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸಿನ್, ರೀಶಾನ್ ತಾಜುದ್ದೀನ್ ಶೇಖ್, ಮಜಿನ್ ಅಬ್ದುಲ್ ರಹಮಾನ್ ಮತ್ತು ನದೀಮ್ ಅಹ್ಮದ್ ಕೆಎ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ.
ರೋಬೋಟಿಕ್ ದಾಳಿಗೆ ಅಧ್ಯಯನ ಮಾಡುವಂತೆ ಸೂಚನೆ: ಭಾರತಕ್ಕಾಗಿ ಉಗ್ರಗಾಮಿ ಗುಂಪಿನ ಕಾರ್ಯಸೂಚಿಯ ಭಾಗವಾಗಿ ಭವಿಷ್ಯದಲ್ಲಿ ಭಯೋತ್ಪಾದಕ ದಾಳಿಗಳನ್ನು ಸಾಗಿಸುವ ಕೌಶಲ್ಯಗಳನ್ನು ಪಡೆದುಕೊಳ್ಳಲು, ರೋಬೋಟಿಕ್ಸ್ ಕೋರ್ಸ್‌ಗಳನ್ನುಅಧ್ಯಯನ ಮಾಡುವಂತೆ ವಿದೇಶಿ ಉಗ್ರಗಾಮಿ ನಾಯಕರು ಇವರಿಗೆ ಸೂಚನೆ ನೀಡಿದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿದೆ.