main logo

ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಶುರು: ಏಳು ನಾಯಕರ ಹೆಸರು ಶಾರ್ಟ್‌ಲಿಸ್ಟ್‌

ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಶುರು: ಏಳು ನಾಯಕರ ಹೆಸರು ಶಾರ್ಟ್‌ಲಿಸ್ಟ್‌

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಮುಖಭಂಗಕ್ಕೀಡಾಗಿರುವ ಬಿಜೆಪಿ ಈಗ ಲೋಕಸಭೆ ಚುನಾವಣೆಗಾಗುವಾಗ ಪಕ್ಷದ ವರ್ಚಸ್ಸನ್ನು ಮೇಲೆತ್ತಬಲ್ಲ ರಾಜ್ಯಾಧ್ಯಕ್ಷನನ್ನು ಹುಡುಕುತ್ತಿದೆ. ಜುಲೈ 3ರಂದು ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮೊದಲು ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿಯಲ್ಲಿ ಪ್ರಕ್ರಿಯೆ ಶುರುವಾಗಿದೆ.

ಸದ್ಯಕ್ಕೆ ರಾಜ್ಯಾಧ್ಯಕ್ಷರಾಗಿರುವ ನಳಿನ್‌ಕುಮಾರ್ ಕಟೀಲು ಅವರ ಅವಧಿ ಮುಗಿದಿದ್ದು ಮತ್ತೆ ಅವರನ್ನೇ ಮುಂದುವರಿಸುವ ಉದ್ದೇಶ ಬಿಜೆಪಿ ಹೈಕಮಾಂಡ್‌ಗೆ ಇಲ್ಲ. ಸ್ವತಹ ನಳಿನ್‌ಕುಮಾರ್‌ ಕಟೀಲು ಜವಾಬ್ದಾರಿಯಿಂದ ಕಳಚಿಕೊಳ್ಳಲು ರೆಡಿಯಾಗಿದ್ದಾರೆ.
ಅರುವತ್ತೈದು ಸ್ಥಾನಕ್ಕೆ ಕುಸಿದಿರುವ ಬಿಜೆಪಿ ಚುನಾವಣೆ ಮುಗಿದು ಎರಡು ತಿಂಗಳಾಗುತ್ತಾ ಬಂದಿದ್ರೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೆರಿ ಹಲವು ಹೆಸರುಗಳ ಪರಿಶೀಲನೆ ನಡೆಯುತ್ತಿದೆ. ಏಳು ಮಂದಿ ನಾಯಕರನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿದೆ. ಈ ಪೈಕಿ ಒಬ್ಬರು ವಿಪಕ್ಷ ನಾಯಕ ಹಾಗೂ ಇನ್ನೊಬ್ಬರು ರಾಜ್ಯಾಧ್ಯಕ್ಷ ಆಗಲಿದ್ದಾರೆ.

ಆರ್.ಅಶೋಕ್, ಸಿ.ಟಿ. ರವಿ, ಶೋಭಾ ಕರಂದ್ಲಾಜೆ, ಬಿ.ವೈ. ವಿಜಯೇಂದ್ರ, ಸೋಮಣ್ಣ, ಶ್ರೀರಾಮುಲು ಹಾಗೂ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಹೆಸರು ಈ ಲಿಸ್ಟ್‌ನಲ್ಲಿದೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಸೈಡ್‌ಲೈನ್ ಮಾಡಿದ ಕಾರಣಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ ಎಂಬ ಕಾರಣಕ್ಕಾಗಿ ಈಗ ಅವರ ಪುತ್ರ ವಿಜಯೇಂದ್ರ ಹೆಸರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಪರಿಗಣಿಸಬೇಕು ಎಂಬ ಪ್ರಬಲ ಒತ್ತಾಯ ಕೇಳಿ ಬರುತ್ತಿದೆ. ಆದರೆ ಪಕ್ಷದಲ್ಲಿ ಬಹಳ ಹಿರಿಯರಾಗಿರುವ ಹಾಗೂ ಒಕ್ಕಲಿಗ ನಾಯಕರಾದ ಸಿ.ಟಿ. ರವಿ, ಆರ್. ಅಶೋಕ್, ಶೋಭಾ ಕರಂದ್ಲಾಜೆ ಅವರಿಗೆ ಜವಾಬ್ದಾರಿ ನೀಡಿದರೆ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂಬುದು ಇನ್ನೊಂದ ತರ್ಕ.

ಹಿಂದುಳಿದ ಸಮುದಾಯದ ಶ್ರೀರಾಮುಲು ಅಥವಾ ಸುನಿಲ್ ಕುಮಾರ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಕು ಎಂಬ ಬೇಡಿಕೆ ಇದೆ. ಇವೆಲ್ಲದರ ನಡುವೆ ವಿ.ಸೋಮಣ್ಣ ಹೈಕಮಾಂಡ್ ಆದೇಶದ ಪ್ರಕಾರ ವರುಣಾ ಮತ್ತು ಚಾಮರಾಜನಗರದಲ್ಲಿ ಸ್ಪರ್ಧೆ ಮಾಡುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಸವಾಲಿಗೆ ಒಡ್ಡಿದ್ದರು. ಹಾಗಾಗಿ ಸೋಮಣ್ಣ ಹೆಸರು ಕೂಡ ಪ್ರಬಲವಾಗಿ ಕೇಳಿ ಬರ್ತಿದೆ. ಒಂದು ಅವಕಾಶವನ್ನ ಕೊಟ್ಟು ನೋಡಿ ಪಕ್ಷವನ್ನ ಕಟ್ಟುತ್ತೇನೆ ಎಂದು ವಿ ಸೋಮಣ್ಣ ಹೈಕಮಾಂಡ್‌ ನಾಯಕರ ಮುಂದೆ ತಮ್ಮ ಆಸೆಯನ್ನ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಆಯ್ಕೆಗೆ ಜಾತಿ ರಾಜಕಾರಣವೂ ಮುಖ್ಯವಾಗುತ್ತದೆ. ಪ್ರಬಲ ಸಮುದಾಯ ಲಿಂಗಾಯತರಿಗೆ ಒಂದು ಹುದ್ದೆಯನ್ನು ನೀಡಲೇ ಬೇಕು. ಇನ್ನೊಂದು ಹುದ್ದೆಯನ್ನು ಒಕ್ಕಲಿಗರಿಗೆ ನೀಡುವುದಾ ಅಥವಾ ಹಿಂದುಳಿದ ವರ್ಗಕ್ಕೆ ನೀಡುವುದಾ ಎಂಬ ಜಿಜ್ಞಾಸೆ ನಡೆಯುತ್ತಿದೆ. ಹಿಂದುಳಿದ ವರ್ಗದವರಿಗೆ ನೀಡಬೇಕೆಂದು ತೀರ್ಮಾನವಾದರೆ ಸುನಿಲ್‌ ಕುಮಾರ್‌ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಸದ್ಯ ಅವರಿಗೆ ಪೈಪೋಟಿ ನೀಡುವ ಹಿಂದುಳಿದ ನಾಯಕ ಇರುವುದು ಶ್ರೀರಾಮುಲು. ಆದರೆ ಚುನಾವಣೆಯಲ್ಲಿ ಅವರು ಸೋತಿರುವುದು ಮತ್ತು ಜನಾರ್ದನ ರೆಡ್ಡಿಯವರಿಗೆ ಆಪ್ತರಾಗಿರುವುದು ಶ್ರೀರಾಮುಲುಗೆ ಮೈನಸ್‌ ಆಗುವ ಸಾಧ್ಯತೆ ಇದೆ.

ವಿಪಕ್ಷ ನಾಯಕನ ಸ್ಥಾನ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಕೊಟ್ಟರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತರನ್ನು ಬಿಟ್ಟು ಇತರರನ್ನು ಪರಿಗಣಿಸುವ ಸಾದ್ಯತೆ ಇದೆ. ಆಗ ಸೋಮಣ್ಣ ರಾಜ್ಯಾಧ್ಯಕ್ಷರಾಗುವ ಆಸೆ ಕೈ ಬಿಡಬೇಕಾಗುತ್ತದೆ.

Related Articles

Leave a Reply

Your email address will not be published. Required fields are marked *

error: Content is protected !!