ಕಂಪಾಲಾ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್ಸಿ) ಗಡಿ ಸಮೀಪದಲ್ಲಿರುವ ಉಗಾಂಡಾದ ಶಾಲೆ ಮೇಲೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನೊಂದಿಗೆ ನಂಟು ಹೊಂದಿರುವ ಉಗ್ರರು ದಾಳಿ ಗುಂಡಿನ ದಾಳಿ ನಡೆಸಿ, ಬೆಂಕಿ ಹಚ್ಚಿದ್ದು, ಕನಿಷ್ಠ 40 ಮಂದಿ ವಿದ್ಯಾರ್ಥಿಗಳು ಸಾವನಪ್ಪಿದ್ದಾರೆ. ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ರಾತ್ರಿ ರಾತ್ರಿ 11.30ರ ಸುಮಾರಿಗೆ ದಾಳಿ ನಡೆದಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಎಂಪೊಂಡ್ವೆಯ ಲುಬಿರಿಹಾ ಮಾಧ್ಯಮಿಕ ಶಾಲೆ ವಸತಿ ನಿಲಯವನ್ನು ಉಗ್ರರು ಸುಟ್ಟುಹಾಕಿದ್ದು, ದಿನಸಿ ಅಂಗಡಿಗಳನ್ನು ಲೂಟಿಗೈಯಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಮಧ್ಯ ಆಫ್ರಿಕಾದಲ್ಲಿ ಐಎಸ್ನ ಶಾಖೆ ಡಿಆರ್ಸಿ ಮೂಲದ ಉಗಾಂಡಾದ ಬಂಡುಕೋರ ಗುಂಪು ಕೃತ್ಯ ನಡೆಸಿದೆ ಎಂದು ಪೊಲೀಸರು ಹೇಳಿದ್ದಾರೆ.
ದಾಳಿ ಬಳಿಕ ವಿರುಂಗಾ ರಾಷ್ಟ್ರೀಯ ಉದ್ಯಾನವನದ ಕಡೆಗೆ ಪಲಾಯನಗೈದ ಉಗ್ರ ತಂಡಕ್ಕಾಗಿ ಉಗಾಂಡಾ ಪೀಪಲ್ಸ್ ಡಿಫೆನ್ಸ್ ಫೋರ್ಸ್ ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವಕ್ತಾರ ಫ್ರೆಡ್ ಎನಾಂಗ್ ಹೇಳಿದ್ದಾರೆ. ಬಂಡುಕೋರರ ಗುಂಪನ್ನು ಪತ್ತೆಹಚ್ಚಲು ಸೇನೆಯು ವಿಮಾನಗಳನ್ನು ನಿಯೋಜಿಸಿದೆ. ಘಟನೆಯಲ್ಲಿ ಪ್ರಾಣತೆತ್ತವರ ಮೃತದೇಹಗಳನ್ನು ಬ್ವೆರಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಉಗ್ರರು ಹಲವು ಯುವತಿಯರನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 1998 ರಲ್ಲಿ, ಡಿಆರ್ಸಿಯ ಗಡಿಯ ಸಮೀಪದಲ್ಲಿರುವ ಕಿಚ್ವಾಂಬಾ ತಾಂತ್ರಿಕ ಸಂಸ್ಥೆಯ ಮೇಲೆ ಎಡಿಎಫ್ ದಾಳಿ ನಡೆಸಿ 80 ವಿದ್ಯಾರ್ಥಿಗಳನ್ನು ಸುಟ್ಟು ಹಾಕಿತ್ತು.