ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದು, ಬೇಸಿಗೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂಗಾರು ಮಳೆ ವಿಳಂಬ ಆದರೆ ಕೃಷಿ ಬೆಳೆಗಳು ಒಣಗಿ ಹೋಗಲಿದ್ದು, ಇದರಿಂದ ಜಿಲ್ಲೆಯ ಅನ್ನದಾತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣ ಆದರೂ ಅಚ್ಚರಿಪಡಬೇಕಿಲ್ಲ.
ಜಿಲ್ಲೆಯಲ್ಲಿ 4,98,244 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವಿದ್ದು, 2,60,901 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಏಪ್ರಿಲ್ ತಿಂಗಳು 46.6 ಮಿ.ಮೀ. ವಾಡಿಕೆ ಮಳೆಯಾಗಿದ್ದು, 26.2 ಮಿಲಿ ಮೀಟರ್ ವಾಸ್ತವ ಮಳೆಯಾಗಿದೆ. ಹೀಗೆ ಜಿಲ್ಲೆಯಲ್ಲಿ 43.8ರಷ್ಟು ಮಳೆ ಕೊರತೆ ಎದುರಾಗಿದೆ. ಮೇ ತಿಂಗಳಿನಲ್ಲಿ 99.9 ಮಿ.ಮೀ. ವಾಡಿಕೆ ಮಳೆಯಾಗಿದ್ದು, 137.3 ಮಿ.ಮೀಟರ್ ವಾಸ್ತವ ಮಳೆಯಾಗಿದೆ. ಆದರೆ ಈ ಮಳೆ ಒಂದೆರೆಡು ದಿನಗಳಲ್ಲಿ ಆಗಿರುವುದರಿಂದ ರೈತರ ಬೆಳೆಗೆ ಅಷ್ಟೇನೋ ಪ್ರಯೋಜನ ಆಗಿಲ್ಲ.
ಇನ್ನು ಜುಲೈ ಮಾಹೆಯಲ್ಲಿ ಮುಂಗಾರು ಬೆಳೆಗಳಾದ ಭತ್ತ, ರಾಗಿ, ಕಬ್ಬು, ದ್ವಿದಳಧಾನ್ಯ, ಎಣ್ಣೆಕಾಳು ಹಾಗೂ ಇತರೆ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ. ಪುಸ್ತುತ ಜಿಲ್ಲೆಯಾದ್ಯಂತ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ತೇವಾಂಶದ ಕೊರತೆಯಿಂದ ಪೂರ್ವ ಹಂಗಾಮಿನಲ್ಲಿ ಮಳೆಯಾಶ್ರಿತದಲ್ಲಿ ಬಿತ್ತನೆಯಾಗಿರುವ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಆದರೆ ಇದೀಗ ಮಳೆ ನೀರಿನ ಅವಶ್ಯಕತೆ ಎದುರಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿರುವ ಪೂರ್ವ ಮುಂಗಾರು ಬೆಳೆಗಳು ಕೈ ಸೇರದೆ ಹೋಗಬಹುದು. ಒಂದು ವೇಳೆ ಇನ್ನೂ ಮಳೆ ಬಾರದೇ ಹೋದರೆ ರೈತರು ಸಾಲ-ಸೋಲ ಮಾಡಿ ಬೆಳೆದ ಬೆಳೆಗಳಿಂದ ಯಾವುದೇ ಪ್ರಯೋಜನ ಇಲ್ಲದಂತಾಗುತ್ತದೆ. ಹಾಗೆಯೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ.