ಶಾಖದ ಅಲೆಯಿಂದ ಕಂಗೆಟ್ಟಿದ್ದ ದೇಶದ ಜನತೆಗೆ ಭಾರತೀಯ ಹವಾಮಾನ ಇಲಾಖೆ(IMD) ಸಿಹಿ ಸುದ್ದಿ ನೀಡಿದೆ. ಮೇ ತಿಂಗಳಲ್ಲೇ ಮುಂಗಾರು(Monsoon) ಆಗಮನದ ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ಮೇ 19ರೊಳಗೆ ದಕ್ಷಿಣ ಅಂಡಮಾನ್ ಸಮುದ್ರ, ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಹೇಳಿದೆ. ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಪ್ರಕಾರ, ನೈಋತ್ಯ ಮುಂಗಾರು ಎರಡು ಮೂರು ದಿನ ಮುಂಚಿತವಾಗಿ ಆಗಮಿಸುವ ನಿರೀಕ್ಷೆಯಿದೆ.
ಮುಂಗಾರು ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳಕ್ಕೆ ಪ್ರವೇಸಿಸುತ್ತದೆ. ಇದಾದ ಬಳಿಕ ಸಾಮಾನ್ಯವಾಗಿ ಉತ್ತರದ ಕಡೆಗೆ ಚಲಿಸುತ್ತದೆ. ಜುಲೈ 15ರ ವೇಳೆಗೆ ಇಡೀ ದೇಶವನ್ನೇ ಆವರಿಸುತ್ತದೆ. ಈ ವರ್ಷದಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರೀಕ್ಷಿಸಿದೆ.
ಮುಂದಿನ 5 ದಿನಗಳಲ್ಲಿ ಮಧ್ಯಪ್ರದೇಶ, ವಿದರ್ಭ, ಛತ್ತೀಸ್ಗಢ, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ (40-60 ಕಿಮೀ) ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಕೂಡ ಐದು ದಿನ ಮುಂಚಿತವಾಗಿಯೇ ಮಳೆ ಶುರುವಾಗಲಿದೆ. ಮೇ ಕೊನೆಯ ವಾರದಲ್ಲೇ ಕರ್ನಾಟಕದಲ್ಲಿ ಮುಂಗಾರು ಆರಂಭವಾಗಲಿದೆ.
ಗುಜರಾತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಬಂಧಿಸಿದಂತೆ, ಮೇ 14 (ಮಂಗಳವಾರ) ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ಹಲವು ಪ್ರದೇಶಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಮಿಂಚು ಮತ್ತು ಬಲವಾದ ಗಾಳಿ ಬೀಸಬಹುದು.
IMD ಪ್ರಕಾರ, ಈ ದಿನ ಮಧ್ಯಪ್ರದೇಶದ ಅನೇಕ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯು ಸಂಭವಿಸಬಹುದು. ಇದಲ್ಲದೇ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.