main logo

ಪರೀಕ್ಷೆ ಹಾಲ್ ಬಿಟ್ಟು ಕಣ್ಮರೆಯಾಗಿದ್ದ ಎಂಎಸ್ಸಿ ವಿದ್ಯಾರ್ಥಿನಿ ಹೋಗಿದ್ದೆಲ್ಲಿ..? ಫ್ರೀ ಬಸ್ ಹತ್ತಿ ಕೊಂಕಣ ಸುತ್ತಿ ಬಂದ ಹುಡುಗಿ

ಪರೀಕ್ಷೆ ಹಾಲ್ ಬಿಟ್ಟು ಕಣ್ಮರೆಯಾಗಿದ್ದ ಎಂಎಸ್ಸಿ ವಿದ್ಯಾರ್ಥಿನಿ ಹೋಗಿದ್ದೆಲ್ಲಿ..? ಫ್ರೀ ಬಸ್ ಹತ್ತಿ ಕೊಂಕಣ ಸುತ್ತಿ ಬಂದ ಹುಡುಗಿ

ಮಂಗಳೂರು: ರೋಶನಿ ನಿಲಯದಲ್ಲಿ ಎಂಎಸ್ಸಿ ಕಲಿಯುತ್ತಿದ್ದು ಪರೀಕ್ಷೆ ಹಾಲ್ ನಿಂದಲೇ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜ್ ಅವರನ್ನು ಪೊಲೀಸರು ಸುಳ್ಯದಲ್ಲಿ ಪತ್ತೆ ಮಾಡಿದ್ದಾರೆ.

 

ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಮೊದಲನೇ ವರ್ಷದ ಎಂಎಸ್ಸಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಮೇ 7ರಂದು ಎರಡನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಹೊರಗೆ ಬಂದವಳು ನಾಪತ್ತೆಯಾಗಿದ್ದಳು. ಮನೆಯವರು ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪುಸ್ತಕ ಮತ್ತು ಮೊಬೈಲನ್ನು ಕಾಲೇಜಿನಲ್ಲಿಯೇ ಬಿಟ್ಟು ತೆರಳಿದ್ದರಿಂದ ಭಾರೀ ಕುತೂಹಲ ಉಂಟಾಗಿತ್ತು.

 

ಪೊಲೀಸರು ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ದೊರಕಿರಲಿಲ್ಲ. ಮೇ 9ರಂದು ಪಾಂಡೇಶ್ವರ ಠಾಣೆಗೆ ವಿದ್ಯಾರ್ಥಿನಿ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಇದ್ದಾಳೆ ಎಂಬ ಮಾಹಿತಿ ದೊರಕಿತ್ತು. ಅಲ್ಲಿ ತೆರಳಿದ ಪೊಲೀಸರು ಆಕೆಯನ್ನು ಮಂಗಳೂರಿಗೆ ಕರೆತಂದು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಎಂಎಸ್ಸಿ ಪರೀಕ್ಷೆಯನ್ನು ಎದುರಿಸುವುದು ಕಷ್ಟವಾಗಿತ್ತು. ತೀವ್ರ ಒತ್ತಡದಿಂದಾಗಿ ಸ್ವಲ್ಪ ವಿಶ್ರಾಂತಿ ಪಡೆಯಬೇಕೆಂದು ನಿರ್ಧರಿಸಿ ತೆರಳಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಕಾಲೇಜಿನಿಂದ ಹೊರಬಂದು ಕಂಕನಾಡಿಯಲ್ಲಿ ಚಿಕ್ಕಮಗಳೂರಿಗೆ ತೆರಳುವ ಬಸ್ಸನ್ನು ಹತ್ತಿದ್ದಳು. ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಫ್ರೀ ಇರುವುದರಿಂದ ನೇರವಾಗಿ ಚಿಕ್ಕಮಗಳೂರು ತೆರಳಿದ್ದು, ಅಲ್ಲಿಂದ ಮೈಸೂರಿಗೆ ಹೋಗುವ ಬಸ್ ಹತ್ತಿದ್ದಾಳೆ. ಅಲ್ಲಿಂದ ಮತ್ತೆ ಮಡಿಕೇರಿಗೆ ಬಸ್ಸಿನಲ್ಲಿ ಬಂದು ಬಸ್ ನಿಲ್ದಾಣದಲ್ಲಿ ನಿಂತುಕೊಂಡಿದ್ದಳು.

 

ಅಲ್ಲಿದ್ದಾಗಲೇ ತಮಿಳು ಮಾತನಾಡುವ ಹುಡುಗಿಯೊಬ್ಬಳು ಪರಿಚಯ ಆಗಿದ್ದು, ಆಕೆಯ ಜೊತೆಗೆ ಬುಧವಾರ ಸುಳ್ಯಕ್ಕೆ ಬಂದಿದ್ದಾಳೆ. ಸುಳ್ಯದ ಅರಂತೋಡಿನಲ್ಲಿ ಆಕೆಯ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದಳು. ದೀಪಿಕಾಗೆ ತಮಿಳು ಬಿಟ್ಟರೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಮೂಲತಃ ತಮಿಳುನಾಡಿನವರಾಗಿದ್ದು, ತಂದೆ, ತಾಯಿ ಮಂಗಳೂರಿನಲ್ಲಿ ನೆಲೆಸಿದ್ದರಿಂದ ಇಲ್ಲಿಯೇ ಓದು ಪೂರೈಸಿದ್ದಳು. ಸುಳ್ಯದಲ್ಲಿ ಹುಡುಗಿ ಇರುವ ಬಗ್ಗೆ ಅವರ ಮನೆಯವರು ಪರಿಚಯದ ಮಂಗಳೂರಿನ ಪೊಲೀಸ್ ಸಿಬಂದಿ ಒಬ್ಬರಿಗೆ ತಿಳಿಸಿದ್ದರು. ಅದರಂತೆ, ಪಾಂಡೇಶ್ವರ ಠಾಣೆ ಪೊಲೀಸರು ತೆರಳಿ ಆಕೆಯನ್ನು ಮಂಗಳೂರಿಗೆ ಕರೆತಂದಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!