ಉಳ್ಳಾಲ: ಸಿದ್ಧರಾಮಯ್ಯನಷ್ಟು ಅಯೋಗ್ಯ ಮುಖ್ಯಮಂತ್ರಿಯನ್ನ ಕರ್ನಾಟಕ ಕಂಡಿಲ್ಲ. ಅಯೋಗ್ಯನೇ ಅವ, ಇಲ್ಲಿ ಎಲೆಕ್ಷನ್ ಕಮೀಷನ್, ಪೊಲೀಸರು ಅಥವಾ ಖಾದರ್ ಹಿಂಬಾಲಕರಿದ್ದರೆ ನನ್ನ ಮೇಲೆ ಕೇಸ್ ಹಾಕಲಿ ಎಂದು ಮಂಗಳೂರು ಉತ್ತರ ಶಾಸಕ ವೈ.ಭರತ್ ಶೆಟ್ಟಿ ಬಹಿರಂಗ ಸವಾಲೆಸೆದಿದ್ದಾರೆ.
ತೊಕ್ಕೊಟ್ಟು ಒಳಪೇಟೆಯಲ್ಲಿ ಸೋಮವಾರ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ನಡೆದ ಚುನಾವಣಾ ಪ್ರಚಾರದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಿಎಂ ಸಿದ್ಧರಾಮಯ್ಯ ನರೇಂದ್ರ ಮೋದಿಗೆ ಅದು ಇದು ಅಂತ ಬಾಯ್ಗೆ ಬಂದ ಹಾಗೆ ಮಾತಾಡ್ತಾನೆ. ನರೇಂದ್ರ ಮೋದಿಯ ಕಾಲು ತೊಳೆದು ನೀರು ಕುಡಿಯುವ ಯೋಗ್ಯತೆ ಇವರಿಗಿಲ್ಲ. ರೋಡು, ತೋಡುಗಳನ್ನ ಯಾರು ಬೇಕಾದರೂ ಮಾಡಬಹುದು. ಆದರೆ ನಮ್ಮ ತತ್ವ, ಸಿದ್ಧಾಂತಗಳನ್ನ ಉಳಿಸಲು ಬಿಜೆಪಿ ಕಾರ್ಯಕರ್ತನೇ ಶಾಸಕ, ಸಂಸದನಾಗಿ ಆರಿಸಿ ಬರಬೇಕು.
ಎಪ್ರಿಲ್ 26 ನಮ್ಮ, ನಮ್ಮ ಮಕ್ಕಳ ಭವಿಷ್ಯ ಬರೆಯುವ ದಿನ, ನಮ್ಮ ಸಮಾಜ, ಸಂಸ್ಕೃತಿ, ಸಂಪ್ರದಾಯ ಉಳಿಸುವ ದಿನ ಆಗಿದೆ. ರಾಜಕೀಯದಲ್ಲಿ ಯುದ್ಧ ಮಾಡಲು ಅರಿಯದವರು ಜಾತಿ, ಮತಗಳನ್ನ ನಡುವಿಗೆ ಎಳೆತಂದು ಸಮಾಜ ಒಡೆದು ಆ ಬೆಂಕಿಯ ಜ್ವಾಲೆಯಲ್ಲಿ ತಮ್ಮ ಬೇಳೆ ಬೇಯಿಸುತ್ತಾರೆ. ಲೇಡಿ ಹಿಲ್ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಿದ್ದು ಬಿಜೆಪಿ. ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಇದೇ ಕಾಂಗ್ರೆಸ್ ನಾಯಕರು. ಆದರೆ ಈಗ ಚುನಾವಣೆ ಸಂದರ್ಭ ಜಾತಿ, ಮತಗಳನ್ನ ಎಳೆದು ತಂದು ರಾಜಕೀಯ ಮಾಡುತ್ತಿದ್ದಾರೆ.
ಕೇಂದ್ರ ಮೋದಿ ಸರಕಾರದ ಯೋಜನೆಗಳು ಯಾವುದೇ ಜಾತಿ, ಮತಗಳಿಗೆ ಸೀಮಿತವಾಗಿಲ್ಲ. ದೇಶದ ಎಲ್ಲಾ ವರ್ಗದವರಿಗೂ ಸಿಗುವ ಯೋಜನೆಗಳನ್ನ ಕೇಂದ್ರ ಸರಕಾರ ಜಾರಿಗೊಳಿಸಿದೆ. ರಾಮನೆಂಬುದೇ ಕಾಲ್ಪನಿಕ, ರಾಮಸೇತು ಕಟ್ಟಲು ರಾಮ ಇಂಜಿನಿಯರಾ ಎಂದು ಕೇಳಿದ ಕಾಂಗ್ರೆಸಿಗರು ಇಂದು ರಾಮ ನಾಮ ಜಪಿಸುತ್ತಿದ್ದಾರೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು, ಮುಖಂಡರಾದ ಸಂತೋಷ್ ರೈ ಬೋಳಿಯಾರು ಮೊದಲಾದವರು ಉಪಸ್ಥಿತರಿದ್ದರು.