ಕೀಟನಾಶಕ ಅಂಶ ಇದೆ ಎಂದು ವರದಿಯಾದ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಕ್ರಮ
ಹೊಸದಿಲ್ಲಿ: ಭಾರತದ ಎರಡು ಪ್ರಸಿದ್ಧ ಮಸಾಲೆ ಉತ್ಪನ್ನಗಳ ಬ್ರಾಂಡ್‌ಗಳಾದ ಎವರೆಸ್ಟ್ ಮತ್ತು ಎಂಡಿಎಚ್‌ನಲ್ಲಿ ನಿಷೇಧಿತ ರಾಸಾಯನಿಕ ಅಂಶಗಳು ಇವೆ ಎಂದು ಸಿಂಗಾಪುರ ಹೇಳಿದ ಬಳಿಕ ಎಚ್ಚೆತ್ತುಕೊಂಡಿರುವ ಆಹಾರ ಇಲಾಖೆ ಅವುಗಳ ಪರೀಕ್ಷೆಗೆ ಮುಂದಾಗಿದೆ. ದೇಶಾದ್ಯಂತ ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳನ್ನು ಪರೀಕ್ಷಿಸಲು ಆಹಾರ ಸುರಕ್ಷತಾ ನಿಯಂತ್ರಕ (ಎಫ್‌ಎಸ್‌ಎಸ್‌ಎಐ) ಮುಂದಾಗಿದೆ ಎಂದು ಮೂಲವೊಂದು ತಿಳಿಸಿದೆ.
ಎಲ್ಲ ಬ್ರಾಂಡ್‌ಗಳ ಸಾಂಬಾರ ಪದಾರ್ಥಗಳ ಮಾದರಿಗಳನ್ನು ಎಫ್‌ಎಸ್‌ಎಸ್‌ಎಐ ಮಾರುಕಟ್ಟೆಯಿಂದ ಸಂಗ್ರಹಿಸುತ್ತಿದೆ. ಈ ಕಂಪನಿಗಳು ನಿಗದಿತ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜನಪ್ರಿಯ ಉತ್ಪನ್ನ ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಕೀಟನಾಶಕ ಅಂಶ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಸಿಂಗಾಪುರ ಆ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ನಿಷೇಧಿಸಿದ ಬೆನ್ನಲ್ಲೇ ಹಾಂಗ್‌ಕಾಂಗ್‌ನ ಆಹಾರ ನಿಯಂತ್ರಣ ಪ್ರಾಧಿಕಾರವೂ ಭಾರತದ ಮೂರು ಮಸಾಲೆ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಎಂದು ಕರೆಯಲ್ಪಡುವ ಕೀಟನಾಶಕವನ್ನು ಹೊಂದಿರುವ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳಿವೆ ಎಂದು ಹೇಳಿದೆ.
ಇತ್ತೀಚೆಗೆ ಹಾಂಗ್ ಕಾಂಗ್‌ನ ಆಹಾರ ನಿಯಂತ್ರಣ ಪ್ರಾಧಿಕಾರ ಸೆಂಟರ್ ಫಾರ್ ಫುಡ್ ಸೇಫ್ಟಿ ಅಧಿಕೃತ ವೆಬ್‌ಸೈಟ್‌ನಲ್ಲಿ ಏಪ್ರಿಲ್ 5 ರಂದು ಪ್ರಕಟವಾದ ವರದಿಯಲ್ಲಿ ಭಾರತದಲ್ಲಿನ ಮೂರು ಮಸಾಲೆ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಇದೆ ಎಂದು ಹೇಳಿದೆ.
ಹಾಂಗ್ ಕಾಂಗ್ ಮತ್ತು ಸಿಂಗಾಪುರದ ಆಹಾರ ನಿಯಂತ್ರಕರು ಏಪ್ರಿಲ್ ಮೊದಲ ವಾರದಲ್ಲಿ ವರದಿಯನ್ನು ಬಿಡುಗಡೆ ಮಾಡಿದ್ದು ಕ್ಯಾನ್ಸರ್ ಉಂಟುಮಾಡುವ ಎಥಿಲೀನ್ ಆಕ್ಸೈಡ್ ಅನ್ನು ಪರೀಕ್ಷಿಸಿದ ಕಾರಣ ಭಾರತದ ಮಸಾಲೆ ಉತ್ಪನ್ನಗಳನ್ನುಸೇವಿಸುವುದನ್ನು ನಿಲ್ಲಿಸುವಂತೆ ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿದೆ.
ಮಸಾಲೆಗಳ ಪಟ್ಟಿಯಲ್ಲಿ ಎರಡು ದೊಡ್ಡ ಭಾರತೀಯ ಕಂಪನಿಗಳಾದ ಎಂಡಿಎಚ್‌ನ ಮೂರು ಮಸಾಲೆ ಉತ್ಪನ್ನಗಳು ಮತ್ತು ಎವರೆಸ್ಟ್ ಸಂಸ್ಥೆಯ ಒಂದು ಉತ್ಪನ್ನದಲ್ಲಿ ಮಿತಿ ಮೀರಿದ ರಾಸಾಯನಿಕಗಳನ್ನು ಹೊಂದಿದೆ ಎಂದು ಹೇಳಿದೆ. ಆದರೆ ಈ ವರದಿಗಳ ಬಗ್ಗೆ ಎರಡು ಕಂಪನಿಗಳು ಕೂಡಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಎಂಡಿಎಚ್‌ನ ಮೂರು ಮಸಾಲೆ ಉತ್ಪನ್ನಗಳಾದ ಮದ್ರಾಸ್ ಕರಿ ಪೌಡರ್ , ಸಾಂಬಾರ್ ಮಸಾಲಾ ಮತ್ತು ಕರಿ ಪುಡಿ ಜೊತೆಗೆ ಎವರೆಸ್ಟ್‌ನ ಫಿಶ್ ಕರಿ ಮಸಾಲಾ ಕೀಟನಾಶಕ, ಎಥಿಲೀನ್ ಆಕ್ಸೈಡ್ ಅನ್ನು ಹೊಂದಿದೆ ಎಂದು ತಿಳಿಸಿದೆ.