ಜನಸ್ತೋಮದ ಮಧ್ಯೆ ತನ್ನ ಆಯಿಲ್ ಪೇಂಟಿಂಗ್ ಭಾವಚಿತ್ರ ಕಂಡು ‘ನಮೋ’ ಪುಳಕಿತ
ಮಂಗಳೂರು: ಕರಾವಳಿಯ ಯುವಕ ಬಿಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರ “ಆಯಿಲ್ ಕ್ಯಾನ್ವಾಸ್’ ಚಿತ್ರವೊಂದನ್ನು ರವಿವಾರ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ ಸಂದರ್ಭ ಪ್ರಧಾನಿ ಮೋದಿ ನೆಚ್ಚಿಕೊಂಡು ಸ್ವೀಕರಿಸಿದ್ದಾರೆ.
ತೊಕ್ಕೊಟ್ಟು ಮೂಲದ ಕಲಾವಿದ ಕಿರಣ್ ಅವರು 24 ಇಂಚು ಎತ್ತರ ಹಾಗೂ 20 ಇಂಚು ಅಗಲದ ಪ್ರಧಾನಿ ಮೋದಿಯವರ ಚಿತ್ರವನ್ನು ಹಿಡಿದುಕೊಂಡು ಕೊಡಿಯಾಲಬೈಲು ಸಮೀಪ ನಿಂತಿದ್ದರು.
ಕಾರ್ಯಕ್ರಮ ಆರಂಭಕ್ಕೂ 2 ತಾಸು ಮೊದಲೇ ಫೋಟೋ ಹಿಡಿದು ಪ್ರಧಾನಿ ಬರುವಿಕೆಗೆ ಕಾಯುತ್ತಿದ್ದರು. ಮೋದಿ ಹತ್ತಿರ ಬರುತ್ತಿದ್ದಂತೆ ಪ್ರಧಾನಿಯವರತ್ತ ಫೋಟೋ ಎತ್ತಿ ಹಿಡಿದು ಅವರ ಗಮನ ಸೆಳೆದರು. ಫೋಟೋ ಕಂಡು ಸಂತಸಗೊಂಡ ಅವರು ತತ್ಕ್ಷಣ ಭದ್ರತಾ ಸಿಬಂದಿಗೆ ಸೂಚಿಸಿ ಅದನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಅದರಂತೆ ಕಿರಣ್ ತೊಕ್ಕೊಟ್ಟು ಬಿಡಿಸಿದ ಫೋಟೋ ಪ್ರಧಾನಿ ಮೋದಿ ಅವರ ಕೈ ಸೇರಿದೆ.
ರೋಡ್ ಶೋ ಸಂದರ್ಭ ನಾನು ಬಿಡಿಸಿದ ಪ್ರಧಾನಿಯವರ ಚಿತ್ರವನ್ನು ಅವರಿಗೆ ಹಸ್ತಾಂತರಿಸಬೇಕೆಂಬ ಆಶೆಯಿತ್ತು. ಆದರೆ ಜನಸ್ತೋಮದ ನಡುವೆ ನಾನು ಪ್ರದರ್ಶಿಸುತ್ತಿದ್ದ ಚಿತ್ರ ಅವರ ಗಮನಕ್ಕೆ ಬರಬಹುದು ಎಂದು ಭಾವಿಸಿರಲಿಲ್ಲ. ಆದರೆ ಪ್ರಧಾನಿಯವರ ಸೂಕ್ಷ್ಮ ದೃಷ್ಟಿಗೆ ನಾನು ಬಿಡಿಸಿದ ಚಿತ್ರ ಕಾಣಿಸಿದ್ದು, ಅವರು ದೂರದಿಂದಲೇ ಗಮನಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಲ್ಲದೆ ಫೋಟೋವನ್ನು ಸ್ವೀಕರಿಸುವಂತೆ ಭದ್ರತಾ ಸಿಬಂದಿಗೆ ಸೂಚಿಸಿದರು. ಸಾಮಾನ್ಯ ಕಲಾವಿದನನ್ನು ಪ್ರಧಾನಿ ಗುರುತಿಸಿರುವುದು ಮರೆಯಲಾಗದ ಸನ್ನಿವೇಶ.
– ಕಿರಣ್ ತೊಕ್ಕೊಟ್ಟು, ಕಲಾವಿದ