ಬೆಂಗಳೂರು: ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಚೆಕ್‌ಪೋಸ್ಟ್‌ಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ಇನ್ನು ಬೆಂಗಳೂರಿನ ಜಯನಗರದ ಕಾರೊಂದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಕೋಟಿ ರೂ. ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಜಯನಗರದಲ್ಲಿ ಬೆಂಜ್ ಕಾರಿನಲ್ಲಿ ಕೋಟಿ ಕೋಟಿ ಹಣವನ್ನು ಸಾಗಿಸಲಾಗುತ್ತಿದೆ ಎಂದು ಅಪರಿಚಿತರು ಕರೆ ಮಾಡಿದ ಹಿನ್ನೆಲೆಯಲ್ಲಿ ಅಖಾಡಕ್ಕಿಳಿದ ಅಧಿಕಾರಿಗಳು, ಸ್ಕೂಟಿಯಲ್ಲಿದ್ದ ಕೋಟಿ ಕೋಟಿ ಹಣವನ್ನು ಕಾರಿಗೆ ಶಿಫ್ಟ್ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು ಕೂಡಲೇ ಎರಡು ಕಾರುಗಳನ್ನು ನಿಲ್ಲಿಸಿ ಪರಿಶೀಲನೆ ಮಾಡುವಾಗ ಕೋಟಿ ಕೋಟಿ ಹಣ ಪತ್ತೆಯಾಗಿದೆ.
ಯಾರಿಗೂ ಅನುಮಾನ ಬಾರದಿರಲಿ ಎಂದು ಕಿಡಿಗೇಡಿಗಳು ಸುಮಾರು 4 ಕೋಟಿ ರೂ. ಹಣವನ್ನು ಗೋಣಿಚೀಲದಲ್ಲಿ ತುಂಬಿದ್ದರು. ಅಧಿಕಾರಿಗಳು ತಪಾಸಣೆಗೆ ಮುಂದಾದ ಮಾವಿನ ಹಣ್ಣಿನ ಬ್ಯಾಗ್ ಎಂದು ಸಬುಬೂ ಹೇಳಿ ಕಾರನ್ನು ಲಾಕ್ ಮಾಡಿದ್ದಾರೆ. ಅನುಮಾನಗೊಂಡ ಚುನಾಣಾಧಿಕಾರಿಗಳು ಕಾರಿನ ಗ್ಲಾಸ್ ಒಡೆದು ಪರಿಶೀಲನೆ ನಡೆಸಿದಾಗ ನಗದು ಪತ್ತೆಯಾಗಿದೆ. ಕಂತೆ ಕಂತೆ ಹಣ ಸಿಗುತ್ತಿದ್ದಂತೆ ಕಾರಿನಲ್ಲಿದ್ದ ಐವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವಶಕ್ಕೆ ಹಣವನ್ನು ಜಯನಗರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ.
ಅನುಮಾನಾಸ್ಪದ ಕಾರಿನ ಗ್ಲಾಸ್ ಒಡೆದು ಮಹಿಳಾ ಅಧಿಕಾರಿ ಹಣ ಸೀಜ್ ಮಾಡಿ ದಿಟ್ಟತನ ಮೆರೆದಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ಫೋಲೋ, ಬೆಂಜ್ ಮತ್ತು ಫಾರ್ಚೂನರ್ ಕಾರುಗಳು ಬಂದು ನಿಂತಿದ್ದವು. ಫೋಲೋ ಕಾರಿನಿಂದ ಬೈಕ್‍ಗೆ ಹಣ ತುಂಬಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೂಡಲೇ ಫಾರ್ಚೂನರ್ ಕಾರಿನಲ್ಲಿ ಐವರು ಪರಾರಿಯಾಗಿದ್ದಾರೆ. ಸದ್ಯ ಎರಡು ಕಾರು ಮಾತ್ರ ಉಳಿದಿವೆ. ಒಂದು ಬೈಕ್ ಹಾಗೂ ಎರಡು ಕಾರುಗಳಲ್ಲಿ ಮೂರು ಬ್ಯಾಗ್‍ನಲ್ಲಿ ಹಣ ಸಿಕ್ಕಿದೆ ಎಂದು ಎಂಸಿಸಿ ನೋಡಲ್ ಆಫೀಸರ್ ಮನೀಷ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಬೆಂಜ್ ಕಾರಿನ ಗ್ಲಾಸ್ ಒಡೆದು ಹಣ ಇರುವ ಬ್ಯಾಗ್‍ನ್ನು ಹೊರಗೆ ತೆಗೆದಿದ್ದು, ಕಾರಿನ ಒಳಗಡೆ ಇದ್ದ ದಾಖಲಾತಿಗಳನ್ನ ವಶಕ್ಕೆ ಪಡೆದಿದ್ದಾರೆ. ಕಾರಿನ ಒಳಗಡೆ ಒಂದು ಮೊಬೈಲ್ ಕೂಡ ಪತ್ತೆಯಾಗಿದೆ. ಇದೀಗ ಎರಡು ಕೌಂಟಿಂಗ್ ಮಷಿನ್‍ಗಳನ್ನು ತರಿಸಿಕೊಂಡು ಅಧಿಕಾರಿಗಳು ಹಣ ಎಣಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಜಯನಗರ ಪೊಲೀಸ್ ಠಾಣೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ್, ಮತ್ತು ಮಾಜಿ ಕಾರ್ಪೋರೇಟರ್ ನಾಗರಾಜ್ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.