ಡಿ.ವಿ. ಸದಾನಂದಗೌಡ ಮಾತಿನ ಅರ್ಥವೇನು?
ಬೆಂಗಳೂರು: ಲೋಕಸಭಾ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ನಿನ್ನೆ ಬಂದು ಭೇಟಿ ಮಾಡಿ ಚರ್ಚೆ ಮಾಡಿ ಆಫರ್ ನೀಡಿದ್ದಾರೆ. ನಾನು ಈ ಬಗ್ಗೆ ಮನೆಯವರೊಂದಿಗೆ ಮಾತನಾಡಿ, ನಾಳೆ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಸಂಸದ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿರುವುದು ನಿಜ. ಇಂದು ನನ್ನ ಹುಟ್ಟುಹಬ್ಬವಿದೆ. ಹಾಗಾಗಿ, ಕಾಂಗ್ರೆಸ್ ಬನಾಯಕರು ಬಂದು ಭೇಟಿ ಮಾಡಿದ ಬಗ್ಗೆ ಕುಟುಂಬದ ಜೊತೆಗೆ ಮಾತುಕತೆ ಮಾಡಬೇಕಿದೆ. ಇಂದು ಮನೆಯರವರೊಂದೊಗೆ ಚರ್ಚೆ ಮಾಡಿದ ಬಳಿಕ ನಾಳೆ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸುತ್ತೇನೆ. ನಾನು ನನ್ನ ನಿಲುವು ತಿಳಿಸುತ್ತೇನೆ. ನನ್ನ ಪಕ್ಷದ ಪ್ರಮುಖರೊಬ್ಬರು ನನ್ನ ಜೊತೆಗೆ ಸಮಾಲೋಚನೆ ಮಾಡಿದ್ದಾರೆ. ನಿನ್ನೆ ನಮ್ಮ ಮನೆಗೆ ಆಗಮಿಸಿ, ಮಾತುಕತೆ ಮಾಡಿದ್ದಾರೆ. ಅವರು ಹೇಳಿರುವ ಮಾತನ್ನು ನಾನು ಈಗ ಹೇಳಲು ಆಗಲ್ಲ. ನಿಮಗೆ ಏನೇ ಸುದ್ದಿ ಬಂದರೂ ಅರ್ಧ ಘಂಟೆ, ಒಂದು ಘಂಟೆ ಮಾತ್ರ. ನಾಳೆ ಎಲ್ಲವನ್ನೂ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಆಗಮನದ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪರ ಬಂಡಾಯ ವಿಚಾರವಾಗಿ ಮಾತನಾಡಿ, ನಾನು ಈಶ್ವರಪ್ಪರ ಬಳಿ ಮಾತನ್ನಾಡಿದ್ದೇನೆ. ನಾನು ಅವರಿಗೆ ಹೇಳಿದ್ದೆ. ಯಾರಿಗೆಲ್ಲಾ ಅನ್ಯಾಯ ಆಗಿದೆಯೋ, ಅವರೆಲ್ಲಾ ಒಂದುಗೂಡಿ ಹೈಕಮಾಂಡ್ ನಾಯಕರ ಬಳಿ ಹೋಗೋಣ ಎಂದಿದ್ದೆ. ಆದ್ರೆ, ಈಶ್ವರಪ್ಪನವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಅದು ಅವರ ನಿಲುವು. ಅವರ ನಿಲುವು ಬಗ್ಗೆ ನಾನೇನು ಹೇಳುವುದಿಲ್ಲ. ನಾನು ನಾಳೆ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.
ಇನ್ನು ಕಾಂಗ್ರೆಸ್ ನಾಯಕರು ಚರ್ಚೆ ಮಾಡಿದ್ದರೂ ನಾನು ಯಾವುದೇ ನಿರ್ಧಾರವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ನನ್ನ ನಿರ್ಧಾರಗಳನ್ನು ನನ್ನ ಕುಟುಂಬದ ಸದಸ್ಯರ ಜತೆ ಚರ್ಚಿಸಬೇಕು. ನಂತರ, ನಾನು ಮುಂದಿನ ತೀರ್ಮಾನವನ್ನು ಬಹಿರಂಗವಾಗಿ ಹೇಳುತ್ತೇನೆ. ಬೆಂಗಳೂರು ಉತ್ತರದಲ್ಲಿ ಶೇ.100 ನನ್ನ ಹೆಸರು ಮಾತ್ರ ಬಂತು. ದೆಹಲಿ ಹಾಗೂ ಸ್ಥಳೀಯವಾಗಿ ಒಂದಷ್ಟು ವಿದ್ಯಮಾನ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ನಿಮಗೇ ಟಿಕೆಟ್ ಅಂತ ಹೇಳಿ ಕೊನೇ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ನನಗೆ ಆಗಿರುವ ಅನ್ಯಾಯದ ಬಗ್ಗೆ ಕೆಲವೊಂದು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಬೇಕಿದೆ. ಅದಕ್ಕಾಗಿ ನಾಳೆ ಸುದ್ದಿಗೋಷ್ಟಿ ಕರೆಯುತ್ತೇನೆ. ನಾಳೆ ಯಾವ ನಿರ್ಣಯ ಅಂತ ಈಗಲೇ ಹೇಳಿಬಿಟ್ಟರೆ, ನಾಳೆಗೆ ಏನೂ ಉಳಿಯಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ, ತಿಳಿದೂ.. ತಿಳಿದೂ ಹೀಗೆ ಮಾಡಿರೋದು ಬೇಜಾರು ತಂದಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸದಾನಂದಗೌಡ ಹೇಳಿದರು.