ಮಂಗಳೂರು : ಲಂಚದ ಹಣ ಸ್ವೀಕಾರ ಮಾಡುವಾಗ ಜಮೀನು ಸರ್ವೆಯರ್ ಒಬ್ಬರು ಲೋಕಾಯುಕ್ತದ ಬಲೆಗೆ ಬಿದ್ದಿದ್ದು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಶೀತಲ್ ರಾಜ್ ಬಂಧಿತ ಆರೋಪಿಯಾಗಿದ್ದಾನೆ.
ಜಮೀನಿನ ಪಹಣಿಯಲ್ಲಿನ ಹೆಸರನ್ನು ತೆಗೆಯಲು ನಿಯಮದಂತೆ ಜಮೀನನ್ನು ಸರ್ವೆ ಮಾಡಿ ನಕ್ಷೆ ತಯಾರಿಸಿ ತತ್ಕಾಲ್ ಪೋಡಿ ಮುಖಾಂತರ ತೆಗೆಯುವ ಪ್ರಕ್ರೀಯೆ ಇರುತ್ತದೆ.ಗುರುಪುರ ಹೋಬಳಿಯಲ್ಲಿರುವ ನೀರುಮಾರ್ಗ ಗ್ರಾಮದ ಶ್ರೀಮತಿ ಲಿಲ್ಲಿ ಪೀಟರ್ ವಾಸ್ ಅವರಿಗೆ 72 ವರ್ಷ ವಾಗಿದ್ದು ಆರೋಗ್ಯ ಸರಿ ಇಲ್ಲದ ಕಾರಣ ಅವರ ಪರವಾಗಿ ದೂರುದಾರರು ಸ್ಟೆಲ್ಲಾ ಜನೆಟ್ ವಾಸ್ ಇವರ ಹೆಸರಿಗೆ ತತ್ಕಾಲ್ ಪೋಡಿ ಮಾಡಿಕೊಡುವ ಬಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಪಹಣಿ ವಿಭಾಗದಲ್ಲಿ ಆನ್ ಲೈನ್ ಮುಖಾಂತರ ಜಮೀನಿನ ತಾತ್ಕಾಲ್ ಪೋಡಿಗಾಗಿ ಅರ್ಜಿ ಸಲ್ಲಿಸಿ ಇದಕ್ಕಾಗಿ 1500 ರೂ ಯನ್ನು ಪವಾತಿ ಮಾಡಿ ರಶೀದಿ ಪಡೆದಿದ್ದರು. ಅದರಂತೆ ಫೆಬ್ರವರಿ 29 ರಂದು ಮಂಗಳೂರಿನ ಸರ್ವೇ ಇಲಾಖೆಯಲ್ಲಿ ಕೆಲಸ ಮಾಡುವ ಶೀತಲ್ ರಾಜ್ ಎಂಬ ಸರ್ವೆಯರ್ ಜಮೀನಿನ ಸರ್ವೆ ನಡೆಸಿ ಸ್ಥಳ ಮಹಜರು ಮಾಡಿಕೊಂಡಿದ್ದರು. ಬಳಿಕ ಜಮೀನಿನ ನಕ್ಷೆ ನೀಡಲು ಸ್ವಲ್ಲ ಖರ್ಚಿದೆ ಎಂದು ಆರಂಭದಲ್ಲಿ 5 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಬಳಿಕ ಅದನ್ನು ನಾಲ್ಕು ಸಾವಿರ ರೂಪಾಯಿಗೆ ಇಳಿಸಿದ್ದ. ಈ ಬಗ್ಗೆ ದೂರು ದಾರರುಮಮಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಗುರುವಾರ ಮಂಗಳೂರಿನ ಮಿನಿ ವಿಧಾನ ಸೌಧದಲ್ಲಿ ನಾಲ್ಕು ಸಾವಿರ ಲಂಚದ ಹಣ ಸ್ವೀಕಾರ ಮಾಡುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರು ಆರೋಪಿ ಶೀತಲ್ ರಾಜ್ ನನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಿಎ ಸೈಮನ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಚೆಲುವರಾಜು, ಡಾ. ಗಾನ ಪಿ. ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಅಮಾನುಲ್ಲಾ ಎ, ಸುರೇಶ್ ಕುಮಾರ್ ಪಿ ಅವರು ಸಿಬಂದಿಗಳ ಜೊತೆ ಕಾರ್ಯಾಚರಣೆ ನಡೆಸಿದ್ದರು.