ಮಂಗಳೂರು: ತನ್ನದೇ ಶಾಲೆಯ ಸ್ಕೂಲ್ ಬಸ್‌ನಲ್ಲಿ (School Bus) ಮನೆಯ ಬಳಿ ಬಂದಿಳಿದ ವಿದ್ಯಾರ್ಥಿಯು ಅದೇ ಬಸ್‌ನಡಿ ಸಿಲುಕಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಬಸ್ ಇಳಿಯುತ್ತಿದ್ದಂತೆ ಬಸ್ ಮುಂಭಾಗಕ್ಕೆ ಬಂದ ವಿದ್ಯಾರ್ಥಿಯನ್ನು ಗಮನಿಸದೆ ಚಾಲಕ ಬಸ್ ಚಲಾಯಿಸಿದ್ದೇ ಈ ಘಟನೆಗೆ ಕಾರಣವಾಗಿದೆ. ಮಂಗಳೂರಿನ ಹೊರವಲಯದ ಕುಳಾಯಿ ಬಳಿ ಈ ಘಟನೆ ನಡೆದಿದೆ. ಈ ವಿಡಿಯೊ (Video Viral) ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಸುರತ್ಕಲ್‌ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಬಸ್‌ನಡಿ ಸಿಲುಕಿರುವುದು ಎಂದು ಗೊತ್ತಾಗಿದೆ. ಆತ ಅಪಾಯದಿಂದ ಪಾರಾಗಿದ್ದಾನೆ. ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.
ಶಾಲೆಯ ಬಸ್ಸಿನಲ್ಲಿ ಬಂದು ಮನೆ ಸಮೀಪ ಇಳಿದ ವಿದ್ಯಾರ್ಥಿಯು ಬಸ್ ಚಲಾಯಿಸುವ ಮೊದಲೇ ಬಸ್‌ನ ಮುಂಭಾಗದ ಮೂಲಕ ರಸ್ತೆ ದಾಟಲು ಮುಂದಾಗಿದ್ದಾನೆ. ಆದರೆ, ಇದು ಚಾಲಕನಿಗೆ ಗೊತ್ತಾಗಿಲ್ಲ. ಹೀಗಾಗಿ ಚಾಲಕ ಬಸ್ ಅನ್ನು ಮುಂದಕ್ಕೆ ಒಯ್ದಿದ್ದಾನೆ. ಆಗ ವಿದ್ಯಾರ್ಥಿಯು ಬಸ್‌ನಡಿ ಸಿಲುಕಿದ್ದಾನೆ. ಈ ವೇಳೆ ಎದುರು ಇದ್ದ ಇನ್ನೊಬ್ಬ ವಿದ್ಯಾರ್ಥಿ ಹಾಗೂ ಮಹಿಳೆಯೊಬ್ಬರು ಜೋರಾಗಿ ಕಿರುಚಿಕೊಂಡಿದ್ದಾರೆ.
ಇದನ್ನು ಗಮನಿಸಿದ ಬಸ್ ಚಾಲಕ ತಕ್ಷಣ ಬಸ್ ನಿಲ್ಲಿಸಿದ್ದಾನೆ. ಕೂಡಲೇ ಎಲ್ಲರೂ ಹೋಗಿ ಬಸ್‌ನಡಿ ನೋಡಿದ್ದಾರೆ. ಆದರೆ, ವಿದ್ಯಾರ್ಥಿಯು ಬಸ್‌ನ ಮಧ್ಯಕ್ಕೆ ಸಿಲುಕಿದ್ದರಿಂದ ಚಕ್ರ ಮೈಮೇಲೆ ಹರಿದಿರಲಿಲ್ಲ. ಹೀಗಾಗಿ ಸಣ್ಣ ಪುಟ್ಟ ಗಾಯಗಳೊಂದಿಗೆ ವಿದ್ಯಾರ್ಥಿ ಪಾರಾಗಿದ್ದಾನೆ. ಸ್ಕೂಲ್ ಬಸ್‌ನಲ್ಲಿ ನಿರ್ವಾಹಕ ಇಲ್ಲದಿರುವ ಕಾರಣ ಹೀಗಾಗಿದೆ. ಚಾಲಕನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.