ಮಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ(ಕೋಚಿಮುಲ್) ಉದ್ಯೋಗಿಗಳ ನೇಮಕಾತಿ ಪ್ರಕರಣದಲ್ಲಿ ಕೈಜೋಡಿಸಿದ ಮಂಗಳೂರು ವಿವಿ ಅಧಿಕಾರಿಗಳನ್ನು ಕೆಲಸದಿಂದ ವಜಮಾಡಬೇಕು, ಪರೀಕ್ಷಾಂಗ ಕುಲ ಸಚಿವರ ಅಮಾನತು ಹಾಗೂ ಪ್ರಭಾರ ಕುಲಪತಿಗಳು ರಾಜೀನಾಮೆ ನೀಡಬೇಕು ಎಂದು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಹರ್ಷಿತ್ ಕೋಯಿಲ ಆಗ್ರಹಿಸಿದ್ದಾರೆ.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ(ಕೋಚಿಮುಲ್) ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯಹ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ ಆರೋಪಿಸಿದ ಬೆನ್ನಲ್ಲಿ ಜ.18ರಂದು ಮಂಗಳೂರು ವಿ.ವಿಗೆ ದಿಡೀರ್ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಶುಕ್ರವಾರ ಬೆಳಗ್ಗಿನ ವರೆಗೆ ವಿ.ವಿ ಪರೀಕ್ಷಾಂಗ ಕುಲಸಚಿವ, ಕುಲಪತಿಗಳ ವಿಚಾರಣೆ ನಡೆಸಿರುವುದು ರಾಜ್ಯದ ಇತಿಹಾಸದಲ್ಲಿ ಮೊದಲು. ಶಿಕ್ಷಣದ ಹೆಸರಿನಲ್ಲಿ ವಿವಿ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿರುವುದನ್ನು ಎಬಿವಿಪಿ ಖಂಡಿಸುತ್ತದೆ ಎಂದು ತಿಳಿಸಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರತಿ ಸೀಟಿಗೆ 20 ರಿಂದ 30 ಲಕ್ಷ ರೂಪಾಯಿ ಹಣ ಪಡೆಯಲಾಗಿದೆ. ಅವ್ಯವಹಾರದಲ್ಲಿ ಶಾಸಕ ಕೆ.ವೈ ನಂಜೇಗೌಡ ನೇರ ಭಾಗಿಯಾಗಿದ್ದಾರೆ ಎಂದು ಇಡಿ ಆರೋಪಿಸಿದರು.. ಕಳೆದ 6 ತಿಂಗಳ ಹಿಂದೆ ನಡೆದ ಈ ನೇಮಕಾತಿ ಪ್ರಕ್ರಿಯೆಯ ಪ್ರಶ್ನೆಪತ್ರಿಕೆ ಸಿದ್ಧತೆ, ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟಣೆಯ ಜವಾಬ್ದಾರಿ ಮಂಗಳೂರು ವಿ.ವಿ ವಹಿಸಿಕೊಂಡಿತ್ತು. ಒಟ್ಟು 81 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿಗೆ ಪ್ರಕಟಣೆ ಹೊರಡಿಸಿತ್ತು. ಮಂಗಳೂರು ವಿವಿಯು ಈ ನೇಮಕಾತಿ ಪರೀಕ್ಷಾ ಪ್ರಕ್ರಿಯೆಯ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿತ್ತು. ಆದರೆ ಕೋಚಿಮುಲ್ ನೇಮಕಾತಿಯಲ್ಲಿ 30 ಅಭ್ಯರ್ಥಿಗಳ ಸಂದರ್ಶನದ ಅಂಕ ತಿದ್ದಲಾಗಿದ್ದು, ಪ್ರತಿ ಹುದ್ದೆಯನ್ನು ರೂ.20 ಲಕ್ಷದಿಂದ 30ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂಬುದನ್ನು ಕೋಚಿಮುಲ್ ನಿರ್ದೇಶಕರು ಹಾಗೂ ನೇಮಕಾತಿ ಸಮಿತಿ ಸದಸ್ಯರು ಶೋಧ ಹಾಗೂ ಜಪ್ತಿ ಪ್ರಕ್ರಿಯೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಜಾರಿ ನಿರ್ದೇಶನಾಲಯ ಕಳೆದ ವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು. ಈಗಾಗಲೇ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ, ಆಡಳಿತಾತ್ಮಕ ನಿರ್ದೇಶಕ, ಅಧಿಕಾರಿಗಳು ಹಾಗೂ ಕೆಲ ನಿರ್ದೇಶಕರನ್ನು ತನಿಖೆ ನಡೆಸಿ ಇ.ಡಿ ಮಾಹಿತಿ ಕಲೆಹಾಕಿದೆ.
ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ರಾಜುಕೃಷ್ಣ ಚಲನ್ನವರ್ ಕೋಚಿಮುಲ್ ನೇಮಕಾತಿ ಪರೀಕ್ಷಾ ಜವಾಬ್ದಾರಿ ವಹಿಸಿಕೊಂಡಿದ್ದು, ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವದಲ್ಲೇ ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗಿದೆ ಎಂಬ ಆರೋಪ ವಿ.ವಿ ಅಧಿಕಾರಿಗಳ ಮೇಲಿದೆ. ಕೋಚಿಮುಲ್ ನೇಮಕಾತಿ ಹಗರಣದಲ್ಲಿ ಮಂಗಳೂರು ವಿ.ವಿ ನೇರ ಬಾಗಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ತಿಂಗಳ ಹಿಂದೆಯೆ ವಿ.ವಿ ಪರೀಕ್ಷಾಂಗ ಕುಲಸಚಿವರಿಗೆ ನೊಟೀಸ್ ಜಾರಿ ಮಾಡಿತ್ತು. ವಿ.ಎ ಅಧಿಕಾರಿಗಳು ಅಭ್ಯರ್ಥಿಗಳಿಗೆ ಪ್ರತೀ ಪ್ರಶ್ನೆಪತ್ರಿಕೆಯನ್ನು 10-15 ಲಕ್ಷ ರೂ.ಗಳಿಗೆ ಮಾರಾಟ ಮಾಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಇ.ಡಿ ತಂಡ ದಿಡೀರ್ ಆಗಮಿಸಿ ಪರೀಕ್ಷಾಂಗ ಕುಲಸಚಿವ, ಕುಲಪತಿಗಳ ವಿಚಾರಣೆ ನಡೆಸಿರುವುದಲ್ಲದೆ, ಪರೀಕ್ಷಾಂಗ ಕುಲಸಚಿವರ ಈ-ಮೇಲ್, ದೂರವಾಣಿ, ಬ್ಯಾಂಕಿಂಗ್ ವ್ಯವಹಾರವನ್ನು ಬೆಳಗ್ಗಿನ ವರೆಗೆ ಪರಿಶೀಲಿಸಿದೆ. ಪ್ರಕರಣದಲ್ಲಿ ಭಾಗಿಯಾದ ವಿ.ವಿ ಪರೀಕ್ಷಾಂಗ ಕುಲಸಚಿವ, ಕುಲಪತಿಗಳನ್ನು ಕರ್ತವ್ಯದಿಂದ ವಜಾ ಮಾಡಬೇಕು, ವಿ.ವಿ ಪರೀಕ್ಷಾಂಗ ಕುಲಸಚಿವರು ಅಮಾನತಾಗಬೇಕು, ಕುಲಪತಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ ಎಂದರು.
ತನ್ನ ವ್ಯಾಪ್ತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಪ್ರಭಾರ ಕುಲಪತಿಗಳು ರಾಜಿನಾಮೆ ನೀಡಬೇಕು, ರಾಜ್ಯ ಸರ್ಕಾರ ಕುಲಪತಿಗಳನ್ನು ನೇಮಕ ಮಾಡಬೇಕು, ಹಗರಣ ನಡೆಸಿದವರನ್ನು ಅಮಾನತು ಮಾಡಬೇಕು. ವಿ.ವಿ ಗೊಂದಲದ ಗೂಡಾಗದೆ, ಶೈಕ್ಷಣಿಕ ಚಟುವಟಿಕೆಗಳು ಸುಗಮವಾಗಿ ನಡೆಯುವ ಜ್ಞಾನ ಕೇಂದ್ರಗಳಾಗುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು. ಇಲ್ಲವಾದಲ್ಲಿ ಮಂಗಳೂರು ವಿ.ವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಒಟ್ಟು ಸೇರುವಿಕೆಯಲ್ಲಿ ವಿಶ್ವವಿದ್ಯಾಲಯ ಚಲೋ ನಡೆಸುವುದಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತದೆ ಎಂದರು. ಶ್ರೀರಾಮ ಆಂಗೀರಸ (ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ), ಹರ್ಷಿತ್ ಕೊಯಿಲ(ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ) ನಿಶಾನ್ ಆಳ್ವ (ಮಂಗಳೂರು ವಿಭಾಗ ಸಂಚಾಲಕ), ಶ್ರೇಯಸ್(ಮಂಗಳೂರು ಮಹಾನಗರ ಕಾರ್ಯದರ್ಶಿ) ಉಪಸ್ಥಿತರಿದ್ದರು.