main logo

ಪುತ್ತಿಗೆ ಶ್ರೀಗಳ ‘ವಿಶ್ವ ಗೀತಾ ಪರ್ಯಾಯ’ ಪ್ರಾರಂಭ – ಪರ್ಯಾಯ ಕಾರ್ಯಕ್ರಮಕ್ಕೆ ಉಳಿದ ಯತಿಗಳು ಗೈರು!

ಪುತ್ತಿಗೆ ಶ್ರೀಗಳ ‘ವಿಶ್ವ ಗೀತಾ ಪರ್ಯಾಯ’ ಪ್ರಾರಂಭ – ಪರ್ಯಾಯ ಕಾರ್ಯಕ್ರಮಕ್ಕೆ ಉಳಿದ ಯತಿಗಳು ಗೈರು!

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಸಂಬಂಧಿಸಿ, 500 ವರ್ಷಗಳ ಇತಿಹಾಸದಲ್ಲಿ ನಡೆದ 252ನೇ ಪರ್ಯಾಯ ಮಹೋತ್ಸವದಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನಾಲ್ಕನೇ ಬಾರಿಗೆ ಶ್ರೀಕೃಷ್ಣನ ದ್ವೈವಾರ್ಷಿಕ ಪೂಜಾಧಿಕಾರವನ್ನು ಸ್ವೀಕರಿಸಿದರು.

ಮಧ್ವ ಪಂಥದ ಯತಿಯಾಗಿದ್ದು, ಸಮುದ್ರೋಲ್ಲಂಘನೆ ಮಾಡಿದ್ದು ಸರಿಯಲ್ಲ ಎಂದು ವಾದಿಸುವ ಉಳಿದ ಏಳು ಮಠಗಳ ಶ್ರೀಗಳು ಈ ಪರ್ಯಾಯೋತ್ಸವದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಪುತ್ತಿಗೆ ಶ್ರೀಗಳು ತಮ್ಮ ಶಿಷ್ಯ ಸುಶೀಂದ್ರ ತೀರ್ಥರ ಸಾಥ್‌ನೊಂದಿಗೆ ಪರ್ಯಾಯ ಪೀಠವೇರಿದರು. ಬುಧವಾರ ರಾತ್ರಿಯಿಂದಲೇ ಆರಂಭಗೊಂಡ ಪರ್ಯಾಯ ಮಹೋತ್ಸವ ದರ್ಬಾರ್‌ (Paryaya Darbar) ಕಾರ್ಯಕ್ರಮದೊಂದಿಗೆ ಗುರುವಾರ ಬೆಳಗ್ಗೆ ಮುಕ್ತಾಯಗೊಂಡಿತು.

ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಇತರ ಮಠಗಳ ಶ್ರೀಗಳು ಗೈರಾಗುತ್ತಿದ್ದಾರೆ. ಇದರೊಂದಿಗೆ 2008ರ ಇತಿಹಾಸ ಪುನರಾವರ್ತನೆಯಾದಂತಾಗಿದೆ.

ಉಡುಪಿ ಕೃಷ್ಣ ಮಠದ ವ್ಯಾಪ್ತಿಯಲ್ಲಿ ಕಾಣಿಯೂರು ಮಠ, ಸೋದೆ ಮಠ, ಪುತ್ತಿಗೆ ಮಠ, ಅದಮಾರು ಮಠ, ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ ಮಠ, ಶೀರೂರು ಮಠ ಹೀಗೆ ಎಂಟು ಮಠಗಳಿವೆ. ಪ್ರತಿ ಮಠಕ್ಕೂ ಎರಡು ವರ್ಷಕ್ಕೊಮ್ಮೆ ಪೂಜಾಧಿಕಾರ ಹಸ್ತಾಂತರವಾಗುತ್ತದೆ. ಅಂದರೆ ಒಂದು ಮಠಕ್ಕೆ ಪ್ರತಿ 14 ವರ್ಷಕ್ಕೊಮ್ಮೆ ಪೂಜಾಧಿಕಾರ ದೊರೆಯುತ್ತದೆ.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು 2008ರಲ್ಲಿ ಪರ್ಯಾಯ ಪೀಠಾರೋಹಣ ಮಾಡಿದ್ದು, ಇದೀಗ ಅಷ್ಟಮಠಗಳ ಒಂದು ಸರತಿ ಮುಗಿದು ಮತ್ತೆ ಅಧಿಕಾರ ಸಿಕ್ಕಿದೆ. ಕಳೆದ ಬಾರಿಯ ಪರ್ಯಾಯದಲ್ಲೂ ಯಾವ ಯತಿಗಳೂ ಭಾಗವಹಿಸಿರಲಿಲ್ಲ. ಭೀಮನಕಟ್ಟೆ ಮಠದ ಶ್ರೀಗಳು ಅವರಿಗೆ ಸಾಥ್‌ ನೀಡಿದ್ದರು. ಈ ನಡುವೆ ಪುತ್ತಿಗೆ ಶ್ರೀಗಳು ಶಿಷ್ಯ ಸ್ವೀಕಾರ ಮಾಡಿದ್ದರಿಂದ ಶಿಷ್ಯರು ಈ ಬಾರಿ ಸಾಥ್‌ ನೀಡಿದ್ದಾರೆ.

2008ರಿಂದ 2010ರವರೆಗೆ ಪುತ್ತಿಗೆ ಶ್ರೀಗಳು ಪರ್ಯಾಯ ಪೀಠವೇರಿದ್ದರೂ ಅಷ್ಟ ಮಠಗಳ ನಿರ್ಣಯದಂತೆ ಶ್ರೀಕೃಷ್ಣನನ್ನು ಮುಟ್ಟಿ ಪೂಜೆ ಮಾಡಿರಲಿಲ್ಲ. ಅವರ ಬದಲಿಗೆ ಶೀರೂರು ಮಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥ ಶ್ರೀಪಾದರು ಪೂಜೆ ಮಾಡಿದ್ದರು. ಈ ಬಾರಿ ಕಿರಿಯ ಯತಿಗಳಾದ ಸುಶೀಂದ್ರ ತೀರ್ಥ ಶ್ರೀಗಳು ಪೂಜಾ ವಿಧಿ ವಿಧಾನಗಳನ್ನು ನಿರ್ವಹಿಸುವ ಸಾಧ್ಯತೆಗಳಿವೆ.

28 ದೇಶಗಳಲ್ಲಿ ಧರ್ಮ ಪ್ರಸಾರ ಮಾಡಿದ ಪುತ್ತಿಗೆ ಶ್ರೀಗಳು

ಸಾಗರೋಲ್ಲಂಘನ ಮಾಡಿ ಮಧ್ವ ಪರಂಪರೆಗೆ ಚ್ಯುತಿ ತಂದ ಆರೋಪದ ಹೊರತಾಗಿಯೂ ಪುತ್ತಿಗೆ ಮಠದ ಪರ್ಯಾಯ ಯತಿಗಳಾದ ಸುಗುಣೇಂದ್ರ ತೀರ್ಥರು 28 ರಾಷ್ಟ್ರಗಳಲ್ಲಿ ಧರ್ಮ ಪ್ರಚಾರ ಮಾಡಿರುವ ಖ್ಯಾತಿಯನ್ನು ಹೊಂದಿದ್ದಾರೆ. ವಿದೇಶದಲ್ಲಿ ಹದಿನಾಋಕ್ಕೂ ಅಧಿಕ ಕೃಷ್ಣಮಂದಿರ ಹಾಗೂ ಮಠಗಳನ್ನು ಸ್ಥಾಪಿಸಿ ಧರ್ಮ ಪ್ರಸಾರ ಮಾಡಿದ್ದಾರೆ.

ಅದ್ಧೂರಿ ಪರ್ಯಾಯ ಮೆರವಣಿಗೆ, ದರ್ಬಾರ್‌: ಅಷ್ಟ ಮಠಗಳ ಒಳಗಿನ ವಿವಾದ ಏನೇ ಇದ್ದರೂ ದ್ವೈವಾರ್ಷಿಕ ಪರ್ಯಾಯ ಮಹೋತ್ಸವದಲ್ಲಿ ಸಂಭ್ರಮಕ್ಕೇನೂ ಕೊರತೆ ಇರಲಿಲ್ಲ. ಪರ್ಯಾಯ ಮೆರವಣಿಗೆಯ ಅಬ್ಬರ ಮುಗಿಲು ಮುಟ್ಟಿತ್ತು. ಪರ್ಯಾಯ ದರ್ಬಾರ್‌ನಲ್ಲಿ ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.

 ದಂಡತೀರ್ಥದಿಂದ ಪರ್ಯಾಯ ದರ್ಬಾರ್‌ವರೆಗೆ: ಪುತ್ತಿಗೆ ಶ್ರೀಗಳು ತಮ್ಮ ಶಿಷ್ಯ ಸಮೇತರಾಗಿ ಗುರುವಾರ ಬೆಳಗಿನ ಜಾವ 1.30ರ ವೇಳೆಗೆ ಕಾಪು ಸಮೀಪದ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದ ಶ್ರೀಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಅಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಯತಿ ದ್ವಯರನ್ನು ಮೆರವಣಿಗೆಯಲ್ಲಿ ರಥಬೀದಿಗೆ ಕರೆ ತರಲಾಯಿತು.

ಏನಿದು ಉಡುಪಿ ಪರ್ಯಾಯ?: ಉಡುಪಿಯ ಕೃಷ್ಣ ದೇಗುಲದಲ್ಲಿ 8 ಮಠಗಳು ಇದ್ದು, ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದ ವೇಳೆ ಎರಡು ವರ್ಷಗಳ ಕಾಲ ಕೃಷ್ಣನ ಸೇವೆ ಮಾಡುವ ಜವಾಬ್ದಾರಿಯನ್ನು ಮತ್ತೊಂದು ಮಠಕ್ಕೆ ಬಿಟ್ಟುಕೊಡಲಾಗುತ್ತದೆ. ಸರದಿಯಂತೆ ಅಷ್ಟ ಮಠಗಳ ಯತಿಗಳು ಎರಡು ವರ್ಷ ಕಾಲ ಶ್ರೀಕೃಷ್ಣನ ಪೂಜೆ, ಸೇವೆ ಮಾಡುತ್ತಾ ಬರುತ್ತಾರೆ.

ಮೆರವಣಿಗೆಯಲ್ಲಿ‌ ಹತ್ತಾರು ಟ್ಯಾಬ್ಲೋಗಳು, ರಾಜ್ಯದ ನಾನಾ ಭಾಗಗಳಿಂದ ಬಂದ ಕಲಾ ತಂಡಗಳು ಭಾಗಿಯಾಗಿದ್ದವು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಸಂಕೇತಿಸುವ ಟ್ಯಾಬ್ಲೋ ಗಮನ ಸೆಳೆಯಿತು.

ಚಂಡೆ ಬಳಗ, ಭಜನಾ ತಂಡಗಳ ಕಲರವ, ಹುಲಿ ವೇಷ ಸಹಿತ ಬಗೆ ಬಗೆಯ ವೇಷಧಾರಿಗಳ ಅಬ್ಬರ ಜೋರಾಗಿತ್ತು. ಮೆರವಣಿಗೆಯ ಕೊನೆಯಲ್ಲಿ ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಸುಶೀಂದ್ರ ತೀರ್ಥರನ್ನು ಹೊತ್ತ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಪರ್ಯಾಯ ಕಾಲದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉಡುಪಿ ವಿವಿಧ ಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಥ ಬೀದಿ ,ಪಾರ್ಕಿಂಗ್, ಪಿಪಿಸಿ ಕಾಲೇಜ್, ಜೋಡುಕಟ್ಟೆ ಸೇರಿದಂತೆ ವಿಧದ ಕಡೆ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಎಲ್ಲಾ ವೇದಿಕೆಯಲ್ಲಿ ಭಜನೆ ,ಸಂಗೀತ ರಸಮಂಜರಿ ಯಕ್ಷಗಾನ, ನಾಟಕ ಕಾರ್ಯಕ್ರಮ ನಡೆದವು.

ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ, ಅಧಿಕಾರ ಸ್ವೀಕಾರ: ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ರಥಬೀದಿಗೆ ಆಗಮಿಸಿದ ಪುತ್ತಿಗೆ ಮಠದ ಅವಳಿ ಶ್ರೀಗಳು ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನ ಮಾಡಿದರು. ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಕೃಷ್ಣ ಮಠ ಪ್ರವೇಶಿಸಿದ ಅವರು, ಅಕ್ಷಯ ಪಾತ್ರೆ ಸ್ವೀಕರಿಸಿ ಸರ್ವಜ್ಞ ಪೀಠಾರೋಹಣ ಮಾಡಿದರು. ಈ ಮೂಲಕ ಎರಡು ವರ್ಷಗಳ ಅವಧಿಗೆ ಕೃಷ್ಣ ಪೂಜೆಯ ದೀಕ್ಷೆಯನ್ನು ಸ್ವೀಕರಿಸಿದರು.

ಪೀಠಾರೋಹಣ ಮಾಡಿದ ಬಳಿಕ ಶ್ರೀಗಳು ಇನ್ನು ಎರಡು ವರ್ಷ ಕೃಷ್ಣ ಮಠದ ರಥಬೀದಿ ಬಿಟ್ಟು ಹೋಗುವಂತಿಲ್ಲ. ಹೊರಗಿನ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ನಿಯಮವಿದೆ.

ಪರ್ಯಾಯ ದರ್ಬಾರ್‌ನಲ್ಲಿ ಗಣ್ಯಾತಿಗಣ್ಯರು ಭಾಗಿ: ಸರ್ವಜ್ಞ ಪೀಠಾರೋಹಣದ ಬಳಿಕ ಅವರು ರಾಜಾಂಗಣಕ್ಕೆ ಆಗಮಿಸಿ ಪರ್ಯಾಯ ದರ್ಬಾರ್‌ನಲ್ಲಿ ಭಾಗವಹಿಸಿದರು. ದರ್ಬಾರ್‌ನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಸ್ಪೀಕರ್‌ ಯು.ಟಿ. ಖಾದರ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

error: Content is protected !!