ಚಂಡೀಗಢ: ಯುವಕನೊಬ್ಬ ತನ್ನ ಪ್ರೇಯಸಿಯ ಬದಲು ನೇಮಕಾತಿ ಪರೀಕ್ಷೆ ಬರೆಯಲು ಹೆಣ್ಣಿನ ವೇಷ ಧರಿಸಿ ಪೊಲೀಸರ ಅತಿಥಿಯಾದ ಘಟನೆ ಪಂಜಾಬ್‍ನ ಫರೀದ್‍ಕೋಟ್‍ನಲ್ಲಿ ನಡೆದಿದೆ. ಪಂಜಾಬ್‍ನ ವಿಶ್ವವಿದ್ಯಾಲಯವೊಂದು ನಡೆಸಿದ ನೇಮಕಾತಿ ಪರೀಕ್ಷೆಗೆ ಅಂಗ್ರೇಜ್ ಸಿಂಗ್ (26) ಎಂಬಾತ ತನ್ನ ಗೆಳತಿ ಪರಮ್‍ಜೀತ್ ಕೌರ್ ಎಂಬಾಕೆಯ ಬದಲು, ಹೆಣ್ಣಿನಂತೆ ಸಲ್ವಾರ್ ಹಾಗೂ ಟೋಪಿ ಧರಿಸಿ ಹೋಗಿದ್ದಾನೆ. ಈ ವೇಳೆ ಬಯೋಮೆಟ್ರಿಕ್ ವಿವರಗಳು ಮೂಲ ಅಭ್ಯರ್ಥಿಯ ವಿವರಗಳೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ಸಂಶಯದಿಂದ ಪರಿಶೀಲನೆ ನಡೆಸಿದಾಗ ಆತ ಸಿಕ್ಕಿಬಿದ್ದಿದ್ದಾನೆ
ಯುವಕ ಮೀಸೆ ಹಾಗೂ ಗಡ್ಡವನ್ನೂ ಸ್ವಚ್ಛವಾಗಿ ತೆಗಿಸಿ, ಹೆಣ್ಣಿನಂತೆ ಮೇಕಪ್ ಮಾಡಿಕೊಂಡಿದ್ದ. ಅಲ್ಲದೇ ಯುವತಿಯ ಹಾಲ್ ಟಿಕೆಟ್ ಮೇಲೆ ತನ್ನ ಫೋಟೋವನ್ನು ಹೆಣ್ಣಿನಂತೆಯೇ ತೆಗೆಸಿ ಅಂಟಿಸಿದ್ದ. ಇಷ್ಟೇ ಅಲ್ಲದೇ ಯುವಕ ತನ್ನ ಸ್ನೇಹಿತೆಯ ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್‍ನ್ನು ಮಾಡಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರದ ಒಳಗೆ ಹೋಗಿ ಕುಳಿತಿದ್ದ ಆತನ ಮುಖ ಹೊಂದಿಕೆಯಾಗದ ಕಾರಣ ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಬಳಿಕ ಬಯೋಮೆಟ್ರಿಕ್ ಮಾಡಿದ ಬಳಿಕ ಆತನ ನಿಜವಾದ ಬಣ್ಣ ಬಯಲಾಗಿದ್ದು, ಅಧಿಕಾರಿಗಳು ಆತನನ್ನು ಮನೆಗೆ ಕಳಿಸಿದ್ದರು. ಬಳಿಕ ಇದೀಗ ಆತನ ವಿರುದ್ಧ ವಿಶ್ವವಿದ್ಯಾಲಯ ದೂರು ದಾಖಲಿಸಿದೆ. ಆತನ ಹಾಗೂ ಆತನ ಗೆಳತಿ ಇಬ್ಬರನ್ನು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.