ಬೆಂಗಳೂರು: ಭಾನುವಾರ ರಾತ್ರಿ ಹೊಸ ವರ್ಷದ ಹಿನ್ನೆಲೆ ಬೆಂಗಳೂರಿನ ಬಾರ್, ಪಬ್ಗಳಲ್ಲಿ ಪಾರ್ಟಿ ಜೋರಾಗಿತ್ತು. ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿದಂತೆ ಎಲ್ಲೆಡೆ ಪಾರ್ಟಿ ಮುಗಿದ ಬಳಿಕ ಯುವಕ, ಯುವತಿಯರು ಕುಡಿದು ತೂರಾಡುತ್ತಿದ್ದದ್ದು ಕಂಡು ಬಂತು. ಕುಡಿದು ಪ್ರಜ್ಞೆ ತಪ್ಪಿದ ಯುವತಿಯರನ್ನ ಪೊಲೀಸರು ಸೇಫ್ಟಿ ಹೈಲ್ಯಾಂಡ್ಗೆ ರವಾನಿಸಿದರು. ಇನ್ನು ಕೆಲವರು ರಸ್ತೆ ಬದಿಯೇ ತಲೆ ಹಿಡಿದುಕೊಂಡು ಕುಳಿತಿರುವ ದೃಶ್ಯಗಳು ಕಂಡು ಬಂದವು. ಓರ್ವ ಯುವತಿಯನ್ನು ಆಟೋದಲ್ಲಿ ಕೂರಿಸಿದ್ರೂ ಸುಮ್ಮನಾಗದೇ ಜೋರಾಗಿ ಕೂಗಾಡಿದ್ದಾಳೆ. ಈ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದವರ ಮೇಲೆ ಮೊಬೈಲ್ ಎಸೆದಿದ್ದಾಳೆ. ನಂತರ ಪೊಲೀಸರು ಜೋರಾಗಿ ಗದರಿದ್ದರಿಂದ ಸುಮ್ಮನಾಗಿದ್ದಾಳೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೋರಮಂಗಲದಲ್ಲಿ ಎಣ್ಣೆ ನಶೆಯಲ್ಲಿದ್ದ ಯುವತಿಯನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸಪಡಬೇಕಾಯ್ತು. ನಾಲ್ಕು ಜನ ಮಹಿಳಾ ಸಿಬ್ಬಂದಿ ಯುವತಿಯನ್ನು ಆಟೋದಲ್ಲಿ ಕರೆದೊಯ್ದು ಸೇಫ್ಟಿ ಹೈಲ್ಯಾಂಡ್ಗೆ ರವಾನಿಸಿದರು.
ಇನ್ನು ಬ್ರಿಗೇಡ್ ರಸ್ತೆಯಲ್ಲಿ ಗೆಳತಿ ಜೊತೆ ಅಸಭ್ಯವಾಗಿ ನಡೆದುಕೊಂಡ ಯುವಕನಿಗೆ ಪ್ರಿಯಕರ ಹಿಗ್ಗಾಮುಗ್ಗ ಥಳಿಸಿದ್ದಾನೆ. ನಂತರ ಮಧ್ಯ ಪ್ರವೇಶಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡು ಪರಿಸ್ಥಿತಿ ತಿಳಿಗೊಳಿಸಿದರು.