ಬೆಂಗಳೂರು: ನಮ್ಮ ಮೆಟ್ರೋದಲ್ಲಿ ನಿನ್ನೆ ಬೆಳಗ್ಗೆ 9.40ರ ಸುಮಾರಿಗೆ ಬೆಂಗಳೂರಿನ ರಾಜಾಜಿನಗರದಲ್ಲಿ ಮೆಟ್ರೋ ಹತ್ತಿದ್ದ 22 ವರ್ಷದ ಯುವತಿಯ ಮೈಕೈ ಮುಟ್ಟಿದ್ದು, ಯುವತಿ ಕೂಗುತ್ತಿದ್ದಂತೆ ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿ ಲೋಕೇಶ್ನನ್ನು ಮೆಟ್ರೋ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಲಾಗಿದ್ದು, ತನಿಖೆಯ ವೇಳೆ ಆರೋಪಿ ಲೋಕೇಶ್ನ ಕರಾಳ ಇತಿಹಾಸ ಬಯಲಾಗಿದೆ. ಈತನ ಮೇಲೆ ಈ ಹಿಂದೆ ಕೂಡ ಕೆಲ ಕೇಸ್ ಗಳಿತ್ತು. ಈ ಹಿಂದೆ ಬಿಎಂಟಿಸಿ ಬಸ್ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿಕೊಂಡಿದ್ದ. ತನಿಖೆಯ ವೇಳೆ ಲೊಕೇಶ್ ಕಳ್ಳತನವನ್ನು ಕಾಯಕ ಮಾಡಿರುವ ವಿಷಯ ಬಯಲಾಗಿದೆ. ಆರೋಪಿ ಬಳಿಯಿಂದ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.
ಪದೇ ಪದೇ ಈ ರೀತಿ ಘಟನೆಗಳು ನಗರದಲ್ಲಿ ನಡೆಯುತ್ತಿರುವುದರಿಂದ ಹೆಣ್ಣು ಮಕ್ಕಳು ಎಷ್ಟು ಸೇಫ್ ಎಂಬ ಪ್ರಶ್ನೆ ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತಾಗಿ ಕಠಿಣ ಕ್ರಮಕೈಗೊಳ್ಳಬೇಕು.