ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಆತ್ಮಹತ್ಯೆ ಪ್ರಕರಣ ಬಗ್ಗೆ ಶಿಂಧೆ ಸರ್ಕಾರ ಈಗ ಎಸ್‌ಐಟಿ ತನಿಖೆ ನಡೆಸಲಿದೆ. ಇದರಿಂದ ಶಿವಸೇನೆ ನಾಯಕ ಆದಿತ್ಯ ಠಾಕ್ರೆಗೆ ಸಂಕಷ್ಟ ಉಂಟಾಗಲಿದೆ. ದಿಶಾ ಸಾಲಿಯಾನ್ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ವಿರುದ್ಧ ತನಿಖೆಗೆ ಹಲವು ಶಾಸಕರು ಒತ್ತಾಯಿಸಿದ್ದಾರೆ. ಕಳೆದ ಚಳಿಗಾಲದ ಅಧಿವೇಶನದಲ್ಲಿ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಎಸ್‌ಐಟಿ ತನಿಖೆಗೆ ಆದೇಶಿಸಿದ್ದರು. ಈಗ ಎಸ್‌ಐಟಿ ರಚನೆಯಾಗಲಿದ್ದು, ತನಿಖೆ ಆರಂಭವಾಗಲಿದೆ.
ಉಡುಪಿಯಲ್ಲಿ ಜನಿಸಿದ ದಿಶಾ ಸಾಲಿಯಾನ್ ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದರು. ಅವರು ವರುಣ್ ಶರ್ಮಾ, ಸುಶಾಂತ್ ಸಿಂಗ್ ರಜಪೂತ್, ಭಾರತಿ ಸಿಂಗ್ ಅವರಂತಹ ಜನಪ್ರಿಯ ನಟರೊಂದಿಗೆ ಕೆಲಸ ಮಾಡಿದರು. ಇದಲ್ಲದೆ, ಆಕೆ ಅನೇಕ ಜಾಹೀರಾತು ಏಜೆನ್ಸಿಗಳೊಂದಿಗೆ ಸಂಬಂಧ ಹೊಂದಿದ್ದಳು. ಆಕೆ ಕಿರುತೆರೆ ನಟ ರೋಹನ್ ರಾಯ್ ಜೊತೆ ಡೇಟಿಂಗ್ ಮಾಡುತ್ತಿದ್ದು ಸಾವಿಗೆ ಕೆಲವು ತಿಂಗಳ ಮೊದಲು ನಿಶ್ಚಿತಾರ್ಥ ಮಾಡಿಕೊಂಡಿದ್ದರು 9 ಜೂನ್ 2020 ರಂದು, ಮುಂಬೈನ ಮಲಾಡ್‌ನಲ್ಲಿರುವ ಕಟ್ಟಡದ 14 ನೇ ಮಹಡಿಯಿಂದ ಬಿದ್ದು ದಿಶಾ ಸಾಲಿಯಾನ್ ಸಾವಿಗೀಡಾಗಿದ್ದರು. ನಂತರ ದಿಶಾ ಸಾವಿಗೂ ಸುಶಾಂತ್ ಸಾವಿಗೂ ಸಂಬಂಧ ಕಲ್ಪಿಸಲಾಗಿತ್ತು. ಏಕೆಂದರೆ ಸುಶಾಂತ್ 5 ದಿನಗಳ ನಂತರ ಅಂದರೆ 14 ಜೂನ್ 2020 ರಂದು ನಿಧನರಾದರು. 28 ವರ್ಷದ ದಿಶಾ ಸಾವಿನ ನಂತರ ಮುಂಬೈ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದಾರೆ.