ಗೂಗಲ್ ಪೇ ಬಳಕೆದಾರರಿಗೆ ಇನ್ನು ಮುಂದೆ ಯುಪಿಐ ಸೇವೆ ಬಳಸಿಕೊಂಡು ಮೊಬೈಲ್ ರೀಚಾರ್ಜ್ ಮಾಡುವಾಗ 3ರೂ. ಹೊಸ ಶುಲ್ಕ ಪರಿಚಯಿಸಲಾಗಿದೆ. ಬಳಕೆದಾರರು ಗೂಗಲ್ ಪೇ ಮೂಲಕ ಪ್ರೀಪೇಯ್ಡ್ ಮೊಬೈಲ್ ರಿಚಾರ್ಜ್ ಪ್ಲ್ಯಾನ್ ಆಯ್ಕೆ ಮಾಡಿದಾಗ ಈ ಶುಲ್ಕ ಅನ್ವಯಿಸುತ್ತದೆ.
ಈ ಮೂಲಕ ಇಂಥ ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ವಿಧಿಸದಿರುವ ಆಪ್ ನ ಈ ಹಿಂದಿನ ನೀತಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ಹೊಸ ನೀತಿಯಿಂದ ಈಗ ಗೂಗಲ್ ಪೇ ಕೂಡ ಇತರ ಯುಪಿಐ ಪಾವತಿ ಆಪ್ ಗಳಾದ ಪೇಟಿಎಂ ಹಾಗೂ ಫೋನ್ ಪೇ ಸಾಲಿಗೆ ಸೇರ್ಪಡೆಗೊಂಡಿದೆ. ಪೇಟಿಎಂ ಹಾಗೂ ಫೋನ್ ಪೇ ಈಗಾಗಲೇ ಇಂಥ ವಹಿವಾಟುಗಳ ಮೇಲೆ ಶುಲ್ಕಗಳನ್ನು ವಿಧಿಸುತ್ತಿವೆ. ಈ ಬದಲಾವಣೆಗಳ ಹೊರತಾಗಿಯೂ ಗೂಗಲ್ ತನ್ನ ಪೇಮೆಂಟ್ ಆಪ್ ನಲ್ಲಿ ಹೆಚ್ಚುವರಿ ಕನ್ವಿನೆನ್ಸ್ ಶುಲ್ಕಗಳ ಬಗ್ಗೆ ಈ ತನಕ ಘೋಷಣೆ ಮಾಡಿಲ್ಲ. ಒಬ್ಬರು ಗ್ರಾಹಕರು 749ರೂ. ಜಿಯೋ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಗೆ ಗೂಗಲ್ ಪೇ ಬಳಸಿ ಪಾವತಿ ಮಾಡಿದಾಗ 3ರೂ. ಶುಲ್ಕ ಸೇರಿಸಿರುವ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕವಷ್ಟೇ ಬಳಕೆದಾರರಿಗೆ ಈ ಬಗ್ಗೆ ತಿಳಿದಿದೆ.
ಈ ಕುರಿತು ಟಿಪ್ ಸ್ಟಾರ್ ಮುಕುಲ್ ಶರ್ಮಾ ಎಕ್ಸ್ ನಲ್ಲಿ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದಾರೆ. 100ರೂ.ಗಿಂತ ಕಡಿಮೆ ಮೊತ್ತದ ರಿಚಾರ್ಜ್ ಪ್ಲ್ಯಾನ್ ಗಳಿಗೆ ಯಾವುದೇ ಕನ್ವಿನೆನ್ಸ್ ಶುಲ್ಕವಿಲ್ಲ. 100ರೂ. ಹಾಗೂ 200ರೂ. ನಡುವಿನ ಪ್ಲ್ಯಾನ್ ಗಳು ಹಾಗೂ 200ರೂ. ಹಾಗೂ 300ರೂ. ನಡುವಿನ ಪ್ಲ್ಯಾನ್ ಗಳಿಗೆ ಕ್ರಮವಾಗಿ 2ರೂ. ಹಾಗೂ 3ರೂ. ಶುಲ್ಕಗಳನ್ನು ವಿಧಿಸಲಾಗುತ್ತದೆ. ಇನ್ನು 300ರೂ. ಮೀರಿದ ವಹಿವಾಟುಗಳಿಗೆ 3ರೂ. ಕನ್ವಿನೆನ್ಸ್ ಶುಲ್ಕ ವಿಧಿಸಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.