main logo

ನಾಲ್ವರ ಹತ್ಯೆ ಕುರಿತು ಎಸ್‌ಪಿ ಮಹತ್ವದ ಮಾಹಿತಿ: ಎಂಟು ತಿಂಗಳಿಂದ ಪರಿಚಯ; ಹತಾಶೆಯಿಂದ ಕೊಲೆಗೆ ಸಂಚು

ನಾಲ್ವರ ಹತ್ಯೆ ಕುರಿತು ಎಸ್‌ಪಿ ಮಹತ್ವದ ಮಾಹಿತಿ: ಎಂಟು ತಿಂಗಳಿಂದ ಪರಿಚಯ; ಹತಾಶೆಯಿಂದ ಕೊಲೆಗೆ ಸಂಚು

ಉಡುಪಿ: ಸಂತೆಕಟ್ಟೆಯ ನೇಜಾರು ಸಮೀಪ ತೃಪ್ತಿ ನಗರದಲ್ಲಿ ನವೆಂಬರ್ 12 ರಂದು ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳನ್ನು ಉಡುಪಿ ಎಸ್‌ಪಿ ಡಾ. ಅರುಣ್ ಕೆ. ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರವೀಣ್ ಮತ್ತು ಐನಾಝ್‌ ನಡುವೆ ಎಂಟು ತಿಂಗಳಿನಿಂದ ಪರಿಚಯವಿತ್ತು. ಇಬ್ಬರಿಗೂ ಬಹಳ ಆತ್ಮೀಯತೆ ಇತ್ತು. ಐನಾಝ್‌ಗೆ ಪ್ರವೀಣ್ ಹಲವಾರು ಸಹಾಯ ಮಾಡಿದ್ದಾನೆ. ಆದರೆ ಸುಮಾರು ಒಂದು ತಿಂಗಳಿಂದ ಐನಾಝ್‌ ಆತನ ಜತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಐನಾಝ್‌ ಬಗ್ಗೆ ಬಹಳ ಪೊಸೆಸ್ಸಿವ್‌ ಆಗಿದ್ದ ಪ್ರವೀಣ್‌ ಹತಾಶೆಯಿಂದ ಕೊಲೆ ಮಾಡಬೇಕೆಂದು ಪೂರ್ವಸಿದ್ಧತೆ ಮಾಡಿಕೊಂಡಿದ್ದ ಎಂದು ತಿಳಿಸಿದ್ದಾರೆ.

ನ.12ರಂದು ಐನಾಝ್‌ ಮನೆಗ ಹೋದ ಆರೋಪಿ ಮೊದಲು ಐನಾಝ್‌ ಮೇಲೆಯೇ ದಾಳಿ ಮಾಡಿದ್ದಾನೆ. ನಂತರ ಹಸೀನಾ, ಅಫ್ನಾನ್, ಆಸಿಂಗೆ ಅದೇ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಒಂದೇ ಚಾಕುವಿನಲ್ಲಿ ನಾಲ್ವರ ಕೊಲೆಗೈದಿದ್ದಾನೆ. ಬಳಿಕ ಬೇರೆ ಬೇರೆ ವಾಹನದಲ್ಲಿ ಮಂಗಳೂರಿಗೆ ಪರಾರಿಯಾಗಿದ್ದಾನೆ. ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕು ಮನೆಯಲ್ಲೇ ಇಟ್ಟು ಹೆಂಡತಿಯ ತವರು ಮನೆಗೆ ಹೋಗಿದ್ದಾನೆ. ಕೈಗೆ ಗಾಯವಾಗಿದೆ ಎಂಬ ಬಗ್ಗೆ ಪತ್ನಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ ಎಂದರು.

ಪ್ರವೀಣ್‌ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. 2007ರಲ್ಲಿ ಪುಣೆಯಲ್ಲಿ ಕೊಂಚ ಸಮಯ ಪೊಲೀಸ್ ಆಗಿದ್ದ. ಉತ್ತಮ ಸಂಬಳಕ್ಕಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸೇರಿದ್ದಾನೆ. ಅಮಲು ಪದಾರ್ಥ ಸೇವನೆ ಮಾಡಿದ್ದಾನೋ ಎಂಬ ಬಗ್ಗೆ ಮೆಡಿಕಲ್ ವರದಿ ಬರಲಿದೆ ಎಂದು ತಿಳಿಸಿದ್ದಾರೆ.

ಕುಡುಚಿಯಲ್ಲಿ ಆರೋಪಿಗೆ ಆಶ್ರಯ ನೀಡಿದ ವ್ಯಕ್ತಿಯ ವಿಚಾರಣೆ ಮಾಡಿದ್ದೇವೆ. ಹೆಚ್ಚುವರಿ ಮಾಹಿತಿ ಬೇಕಾಗಿದ್ದರೆ ಅವರಿಂದ ಮಾಹಿತಿ ಪಡೆಯುತ್ತೇವೆ. ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರ ಬಂದೋಬಸ್ತ್ ನಿಯೋಜನೆ ಆಗಿದೆ ಎಂದು ಎಸ್.ಪಿ ಹೇಳಿದರು.

ಹಸೀನಾಗೆ ಆರ್ಥಿಕ ಮೋಸವಾದ ಬಗ್ಗೆ ಮಾಹಿತಿ ಸಿಕ್ಕಿದೆ. ಕುಟುಂಬದಿಂದ ದೂರು ಪಡೆದುಕೊಂಡು ತನಿಖೆ ಮಾಡುತ್ತೇವೆ. ಐನಾಝ್ ಕುಟುಂಬ ತನಿಖೆಗೆ ಬಹಳ ಸಹಕಾರ ಕೊಟ್ಟಿದೆ. ನೂರ್ ಮೊಹಮ್ಮದ್ ಕುಟುಂಬ ಬಹಳ ನೋವಲ್ಲಿದೆ. ವಿಶೇಷ ವಕೀಲರ ನೇಮಕಕ್ಕೆ ನಾವು ಸಹಕಾರ ನೀಡುತ್ತವೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಬಗ್ಗೆ ಕುಟುಂಬ ಮನವಿ ನೀಡಿದೆ ಎಂದರು.

ತನಿಖೆಗೆ ಒಟ್ಟು 11 ತಂಡ ರಚನೆ ಮಾಡಿದ್ದೆವು. ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಎಲ್ಲ ಕಡೆಯಿಂದ ಮಾಹಿತಿ ಬಂದ ಕಾರಣ ಎಲ್ಲವನ್ನೂ ತನಿಖೆ ಮಾಡಿದ್ದೇವೆ. ನಾಲ್ವರ ಕೊಲೆ ಪ್ರಕರಣ ದೊಡ್ಡ ಸವಾಲಾಗಿತ್ತು. ರಾಷ್ಟ್ರಮಟ್ಟದಲ್ಲಿ ಚರ್ಚೆಯಾದ ಪ್ರಕರಣ ಇದಾಗಿತ್ತು. ನಾವು ತಂಡವಾಗಿ ಕೆಲಸ ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಚಾರ್ಜ್‌ಶೀಟ್ ಸಲ್ಲಿಕೆಗೆ ಇನ್ನೂ 70-80 ದಿನ ಇದೆ. ಎಲ್ಲ ಸಾಕ್ಷಿಗಳ ಸಂಗ್ರಹ ಮಾಡುತ್ತಿದ್ದೇವೆ. ಸುಮಾರು 50 ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ ಎಂದು ಎಸ್‌ಪಿ ಹೇಳಿದರು.

Related Articles

Leave a Reply

Your email address will not be published. Required fields are marked *

error: Content is protected !!