main logo

ಬದ್ಧರಾಗುವುದೆಂದರೆ ಬುದ್ಧನಾದಂತೆ

ಬದ್ಧರಾಗುವುದೆಂದರೆ ಬುದ್ಧನಾದಂತೆ

ನಾವು ನಿತ್ಯ ಕೇಳುವ ಒಂದು ಸಾಮಾನ್ಯ ಪದ ‘ಬದ್ಧತೆ’. ಹಿಡಿದ ಅಥವಾ ಕೊಟ್ಟ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಅಸಮರ್ಥರಾದಾಗ ‘ಅವರಿಗೆ ಬದ್ಧತೆಯಿಲ್ಲ ಎಂದು ಆಡಿಕೊಳ್ಳುತ್ತೇವೆಯೂ ಹೌದು. ಬದ್ಧರಾಗುವುದೆಂದರೆ ಒಂದು ರೀತಿಯ ಕಮಿಟ್ಮೆಂಟ್ ಆದರೂ ಬದ್ಧತೆ ಹೊಂದಿದ್ದೇವೆಯೆಂದರೆ ನಿಷ್ಠೆಯಿಂದ ಚೊಕ್ಕವಾಗಿ ಹಿಡಿದ ಕಾರ್ಯವನ್ನು ಮಾಡಿ ಮುಗಿಸುವುದು ನಮ್ಮ ಕರ್ತವ್ಯವೂ ಆಗಿರುತ್ತದೆ. ಹಾಗಿದ್ದರೆ ಬದ್ಧತೆಯ ಹಾದಿ ಅಷ್ಟು ಸರಳವೇ ಎಂದು ಕೇಳಿದಾಗೆಲ್ಲ ಕಿಸಾಗೋತಮಿಯ ಕತೆ ನೆನಪಾಗುತ್ತದೆ.

ತನ್ನ ಮೃತ ಕೂಸನ್ನು ಬುದ್ಧನ ಮುಂದಿರಿಸಿ ‘ಮಗುವನ್ನು ಮತ್ತೆ ಬದುಕಿಸಿ’ ಎಂದಾಗ ಬುದ್ಧ ನಗುತ್ತಾ ‘ನಾನೊಂದು ಕಾರ್ಯ ಹೇಳುವೆ ಬದ್ಧತೆಯಿಂದ ಮಾಡುವೆಯಷ್ಟೇ!” ಎಂದು ಕೇಳುತ್ತಾರೆ. ‘ಮಗು ಮತ್ತೆ ಬದುಕುವುದೇ ಆದರೆ ತಮ್ಮ ಮಾತಿಗೆ ಬದ್ಧಳಾಗುತ್ತೇನೆ’ ಎನ್ನುತ್ತಾಳೆ ಕಿಸಾಗೋತಮಿ. ‘ಹಾಗಿದ್ದರೆ ಸಾವಿಲ್ಲರ ಮನೆಯಿಂದ ಒಂದು ಕಾಳು ಸಾಸಿವೆ ತಾ, ನೀನು ಬದ್ಧಳಾಗಿದ್ದೀಯೆಂದು ಒಪ್ಪಿಕೊಳ್ಳುತ್ತೇನೆ’ ಎಂದ ಬುದ್ಧನಿಗೆ ತರುವೆನೆಂದು ಮಾತು ಕೊಟ್ಟವಳು ಅದು ಅಸಾಧ್ಯವಾದಾಗ ಸೋತು ಮತ್ತೆ ಹಿಂತಿರುಗುತ್ತಾಳೆ. ಈ ಬಾರಿಯೂ ನಕ್ಕ ಬುದ್ಧ ‘ನನ್ನ ಮಾತಿಗೆ ಬದ್ಧಳಾಗಿ ತರುತ್ತೇನೆಂದು ಹೊರಟವಳು ಪ್ರಬುದ್ಧಳಾಗಿಲ್ಲವಾದುದರಿಂದ ಬುದ್ಧನ ಹಾದಿ ಹಿಡಿಯುವೆಯಾ!?’ ಎಂದು ಕೇಳುತ್ತಾನೆ.

ಇಲ್ಲಿ ‘ಬದ್ಧ’ ಎಂಬ ಪದಕೊಡುವ ಅರ್ಥ ‘ಕಟ್ಟು ಬೀಳುವುದು’ ಎಂದಾಗುತ್ತದೆ. ಬುದ್ಧನ ಮಾತಿಗೆ ಕಟ್ಟು ಬಿದ್ದು ಹೊರಟ ಕಿಸಾಗೋತಮಿ ತನ್ನ ಕಾರ್ಯದಲ್ಲಿ ಸಫಲಳಾಗದಿದ್ದಾಗ ಮಾತು ಮುರಿದವಳೆಂಬ ಅರ್ಥವಲ್ಲ ಬದಲಾಗಿ ಆಕೆ ಕೊಟ್ಟ ಮಾತಿಗೆ ಮನ್ನಣೆಯಿತ್ತು ಅಂದರೆ ಬದ್ಧಳಾಗಿ ಸಾಸಿವೆ ಹುಡುಕ ಹೊರಟದ್ದಕ್ಕಷ್ಟೇ ‘ಸಾವಿಲ್ಲದ ಮನೆಯಿಲ್ಲ, ಮರಣವಿಲ್ಲದ ಜೀವಿಯಿಲ್ಲ ಎಂಬ ಸತ್ಯವನ್ನರಿಯುವುದು ಸಾಧ್ಯವಾಯಿತು ಮತ್ತು ತನ್ನ ಮಗನ ಮರಣ ಆತನನ್ನು ಮತ್ತೆ ಎಚ್ಚರಿಸುವುದಿಲ್ಲ ಎಂಬುದನ್ನರಿತು ಬುದ್ಧನಿಗೆ ಬದ್ಧಳಾಗಿ ಆತನ ಮಹಿಳಾ ಅನುಯಾಯಿಗಳಲ್ಲಿ ಒಬ್ಬಳಾಗುತ್ತಾಳೆ.

ಇದು ಕೇವಲ ಕಿಸಾಗೋತಮಿಯ ಕತೆಯಷ್ಟೇ ಮಾತ್ರವಲ್ಲ. ಪ್ರತಿನಿತ್ಯದ ನಮ್ಮ ಬದುಕೂ ಹೌದು. ಏನನ್ನೋ ಹುಡುಕುತ್ತೇವೆ, ಇನ್ನೇನೋ ಸಿಗುತ್ತದೆ ಆದರೆ ಸಿಕ್ಕಿದುದರಲ್ಲಿ ನಾವು ಪೂರ್ಣತೃಪ್ತರಾಗುವುದೇ ಇಲ್ಲ. ಆದರೆ ಹುಡುಕ ಹೊರಟಾಗ ಬದ್ಧರಾಗಿ ಅಂದರೆ ನಿಷ್ಠೆಯಿಂದ ತೊಡಗಿದರೆ ಸಿಕ್ಕ ಪ್ರತಿಫಲವೂ ಪೂರ್ಣತೃಪ್ತಿಯನ್ನು ಕೊಡಲು ಸಾಧ್ಯ. ಅದಿಲ್ಲದೆ ಯಾರದ್ದೋ ಒತ್ತಾಯಕ್ಕೋ ಅಥವಾ ಮಾಡಿ ಮುಗಿಸಲೇಬೇಕೆಂಬ ಅನಿವಾರ್ಯಕ್ಕೋ ಕೈಗೊಂಡರೆ ಪ್ರತಿಯೊಬ್ಬರೂ ಅತೃಪ್ತ ಕಿಸಾಗೋತಮಿಯರಾಗುತ್ತೇವೆಯೇ ಹೊರತು ಬದ್ಧ ಬುದ್ಧನಾಗುವ ಬಗೆಯೆಂತು!?

ಬುದ್ಧನಾಗುವ ಮೊದಲು ನಾವೆಲ್ಲರೂ ಬದ್ಧರಾಗುವ ಅವಶ್ಯಕತೆ ಬಹಳವಿದೆ. ಬದ್ಧರಾಗುತ್ತಾ ಹೋದಂತೆ ಪ್ರಬುದ್ಧ ಲೋಕ ತೆರೆದುಕೊಳ್ಳುತ್ತದೆ ಮತ್ತು ಆ ಲೋಕದಲ್ಲಷ್ಟೇ ಬುದ್ಧನ ಇರವು ಸಾಧ್ಯ. ಬುದ್ಧನಾಗುವುದೆಂದರೆ ತ್ಯಾಗ, ಅಹಿಂಸೆ ಎಂಬ ಸಿದ್ಧಾಂತಗಳ ಪಾಲನೆಯೆಂಬುದಷೇ ಅಲ್ಲ. ಹಿಂಸೆಯನ್ನು ತ್ಯಾಗ ಮಾಡಬೇಕು, ಮಾನವ ಪ್ರೀತಿಯನ್ನು ಆಹ್ವಾನಿಸಿಕೊಳ್ಳಬೇಕೆಂಬುದೂ ಹೌದು. ಬದ್ಧರಾಗದೆಯೇ ಬುದ್ಧನಾಗುವುದು ಸಾಧ್ಯವಿಲ್ಲ ಹಾಗೆಂದ ಮಾತ್ರಕ್ಕೆ ತಾನು ಬುದ್ಧನಾಗುತ್ತೇನೆಯೆಂದವನು ಪೂರ್ಣ ಪ್ರಮಾಣದಲ್ಲಿ ಪ್ರಬುದ್ಧನಾಗದೆ ಮಾತಿಗೆ ಬದ್ಧನಾಗಲೂ ಅಸಾಧ್ಯ.

ಬುದ್ಧನೇ ಹೇಳಿದಂತೆ “ನೆನ್ನೆ, ನಾಳೆಗಳ ನಡುವೆ ಇಂದು ಎಂಬ ವಾಸ್ತವವೊಂದಿದೆ. ಆ ವಾಸ್ತವದಲ್ಲಿ ಭ್ರಮೆಅಥವಾ ಕನಸುಗಳಲ್ಲಿ ವಿಹರಿಸದೆ ಶಾಂತಚಿತ್ತನಾಗಿ ಮಾಡುವ ಕಾರ್ಯಕ್ಕೆ ಬದ್ಧನಾಗು” ಎಂಬುವುದನ್ನು ಈ ಬುದ್ಧಪೂರ್ಣಿಮೆಯ ದಿನ ನಾವೆಲ್ಲರೂ ಮನನ ಮಾಡಿಕೊಳ್ಳುವುದು ಅತೀ ಅಗತ್ಯವಾಗಿದೆ.

ಅಪ್ಪ ನೆಟ್ಟ ಆಲದಮರ:

ಆತನೊಬ್ಬ ಹುಟ್ಟು ಸೋಮಾರಿ. ಯಾವುದೇ ಕೆಲಸವಾದರೂ ಆಸಡ್ಡೆಯಿಂದ ನೋಡುತ್ತಿದ್ದನೇ ಹೊರತು ಆಸಕ್ತಿಯೆಂಬುದಿರದ ಆಸಾಮಿಯಾಗಿದ್ದ. ಈತನ ಆಲಸ್ಯ ಕಂಡು ಬೇಸತ್ತ ಅಕ್ಕಪಕ್ಕದವರು “ನಿನ್ನಪ್ಪ ಎಷ್ಟು ಉದಾರಿಯಾಗಿದ್ದ, ನೀನೋ ಸೋಂಬೇರಿ ಮಗ, ಅಪ್ಪನ ಬುದ್ಧಿ ಎಳ್ಳಷ್ಟಾದರೂ ಬರಬಾರದಿತ್ತೇ!” ನಿತ್ಯ ಗೊಣಗುತ್ತಿದ್ದುದನ್ನು ಕೇಳಿ ಅದೊಂದು ದಿನ ತಾನೂ ಏನಾದರೂ ಮಾಡಬೇಕೆಂಬ ಹಂಬಲ ಉಂಟಾಯಿತಾದರೂ ಏನು ಮಾಡಬೇಕೆಂದು ತಿಳಿಯದೇ ಅಲ್ಲೇ ಸನಿಹದಲ್ಲಿದ್ದ ಯೋಗಿಯೊಬ್ಬರ ಬಳಿಗೆ ತೆರಳಿದನು.

ಆತನನ್ನೇ ನೋಡಿದ ಯೋಗಿಗಳು “ನಿನ್ನಪ್ಪ ಊರಿಗೆ ಉಪಕಾರಿಯಾಗಿದ್ದ, ಅದೋ ನೋಡಲ್ಲಿ ಅದು ನಿನ್ನಪ್ಪ ನೆಟ್ಟ ಆಲದಸಸಿ ಈಗ ವೃಕ್ಷವಾಗಿ ಸುತ್ತಲೂ ಹಬ್ಬಿ ನೆರಳು ನೀಡುತ್ತಿದೆ, ಬಿಳಲುಗಳನ್ನೊಮ್ಮೆ ಗಮನಿಸು, ಕೊಂಬೆಯನ್ನೂ ಬೇರನ್ನೂ ಬಿಡದೆ ಮತ್ತೆ ಮಣ್ಣನ್ನು ಅಪ್ಪಿಕೊಳ್ಳುತ್ತಿದೆ. ಬದುಕಿದರೆ ಆಲದ ಮರದ ಬಿಳಲಿನಂತಿರಬೇಕು. ಅಪ್ಪ ನೆಟ್ಟ ಸಸಿಯನ್ನುಪಯೋಗಿಸಿ ಏನಾದರೂ ಒಳಿತನ್ನು ಮಾಡು” ಸಲಹೆಯನ್ನಿತ್ತರು. ಮಾತು ಕೇಳಿದ ಸೋಂಬೇರಿ ಮಗನಿಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಅಂದಿನಿಂದ ಪ್ರತಿದಿನ ದಿನಕ್ಕೆರಡು ಬಾರಿ ಮರದ ಬಳಿ ಬಂದು ನೋಡುತ್ತಿದ್ದುದಷ್ಟೇ ಬಂತಲ್ಲದೇ ಬೇರೇನೂ ತಲೆಗೆ ಹೊಳೆಯದಿದ್ದಾಗ ಸಾಕಿದಜ್ಜಿಯಲ್ಲಿ ನಡೆದ ಪ್ರಸಂಗ ವಿವರಿಸಿದ. ಮೊಮ್ಮಗನ ಬುದ್ಧಿ ತಿಳಿದಿದ್ದಾಕೆ “ನಿನಗೆ ಯಾರು ಹೇಳಿದರೇನು ಫಲ! ಹೋಗಿ ನೇಣು ಹಾಕ್ಕೋ ಬೇಕಷ್ಟೇ ನೀನು” ಅವಳ ಸಿಟ್ಟಿನ ಮಾತಿನಲ್ಲಿ ನೇಣೆಂಬ ಪದವಷ್ಟೇ ಕೇಳಿದ ಸೋಂಬೇರಿ ಮೊಮ್ಮಗ ಮಾರನೇ ದಿನ ನೇರ ಹೋಗಿ ಆಲದ ಮರದ ಬಿಳಲಿನಲ್ಲಿ ನೇಣು ಹಾಕಿಕೊಂಡ.

ಇದು ಒಬ್ಬ ಸೋಂಬೇರಿಯ ಕತೆಯಷ್ಟೇ ಅಲ್ಲ. ಇಂತಹ ವಿಲಕ್ಷಣ ಘಟನೆಗಳಿಗೆ ನಾವೆಲ್ಲರೂ ನಿತ್ಯ ಸಾಕ್ಷಿಗಳೇ. ಬಹಳಷ್ಟು ಸಲ ಉಪಯೋಗ ತಿಳಿದಿದ್ದರೂ ಅವಗಣಿಸುತ್ತೇವೆ ಅಥವಾ ಅದರಿಂದೇನು ಫಲವೆಂದು ಸುಮ್ಮನಿರುತ್ತೇವೆಯೆಂಬುದು ಒಂದು ವಿಷಯವಾದರೆ ಇನ್ನೂ ಬಹಳಷ್ಟು ಸಲ ಯಾವುದೋ ಹಳೆಯ ವಿಚಾರಗಳಿಗೆ ಒಗ್ಗಿಕೊಂಡು ಹೊಸ ಸಾಧ್ಯತೆ ಅವಲೋಕಿಸುವುದರತ್ತ ಗಮನ ಹರಿಸುವುದನ್ನೇ ಮರೆತು ಬಿಡುತ್ತೇವೆ. ಇಂತಹ ಸಂದರ್ಭದಲ್ಲಿ ಅನನುಭವಿಯೊಬ್ಬ ಹೇಳಿದ ಮಾತು ನಮಗೆ ಸರಿಯೆನಿಸುತ್ತದೆ ಹಾಗೂ ಹಿಂದೆ ಮುಂದೆ ನೋಡದೆಯೇ ಕಾರ್ಯಪ್ರವೃತ್ತರಾಗುತ್ತೇವೆ.

ಏಕೆ ಹೊಸ ಸಾಧ್ಯತೆಗಳತ್ತ ನಾವು ಮುಖ ಮಾಡುವಲ್ಲಿ ಹಿಂಜರಿಯುತ್ತೇವೆಯೆಂಬ ಪ್ರಶ್ನೆಗೆ ತುಂಬಾ ಸಲ ಸಿಗುವ ಉತ್ತರವೇ ವಿಫಲವಾದರೆ ಎದುರಿಸಬೇಕಾದ ಸಮಾಜದ ನೋಟ ಎಂಬುದು. ಹಾಗೆ ನೋಡಿದರೆ ಸೋಲದ ಪ್ರಯತ್ನ ಪ್ರಪಂಚದಲ್ಲಿರಲು ಸಾಧ್ಯವೇ? ಒಂದು ಗೆಲುವಿಗಿಂತ ಹತ್ತು ಸಲ ಸೋತ ನಂತರದ ಸಂಭ್ರಮ ಹೆಚ್ಚು ಖುಷಿಯನ್ನು ಕೊಡುತ್ತದೆಯಷ್ಟೇ ಅಲ್ಲದೆ ಅದು ಅನುಗಾಲ ನೆನಪಿಲ್ಲಿ ಉಳಿಯುವಂತಹದ್ದು. ಹಾಗಿದ್ದಾಗ ಮೊದಲು ಪ್ರಯತ್ನ ಆ ನಂತರ ಸೋಲು ಗೆಲುವಿನ ಲೆಕ್ಕಾಚಾರವೆಂಬ ಗಣಿತವನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಸೋಂಬೇರಿ ಮಗನಂತೆ ಮುಂದೇನು ಮಾಡುವುದೆಂದು ತೋಚದೆಯೇ ಮೂರನೆಯವರ ಮಾತಿಗೆ ಹರಕೆಯ ಕುರಿಯಾಗಬೇಕಾಗುತ್ತದೆ.

ಹಾಗಿದ್ದರೆ ಈ ಪ್ರಯತ್ನ ಹೇಗಿರಬೇಕು?:
ನಾವು ಯಾವುದೇ ಹೊಸ ಕಾರ್ಯವನ್ನು ಪ್ರಯತ್ನಿಸುವ ಮೊದಲು ಸಾಧಕ-ಬಾಧಕಗಳ ಪಟ್ಟಿಯನ್ನು ನಮಗೆ ನಾವೇ ಹಾಕಿಕೊಂಡೆ ಪುನರ್ಮನನ ಮೊದಲು ಮಾಡಬೇಕು. ಪ್ರತಿದಿನ ಪ್ರತೀ ಕೆಲಸಗಳಿಗೆ ಸಲಹೆ ಕೊಡುವ ಮಂದಿ ನಮ್ಮ ಸುತ್ತಲೂ ಅನೇಕರಿದ್ದಾರೆ ಆದರೆ ಎಲ್ಲಾ ಸಲಹೆಗಳಿಗೆ ಕಿವಿಯಾಗುವ ಪ್ರಥಮದಲ್ಲಿ ನಮ್ಮ ಮನಸ್ಸು ನಮ್ಮ ಬುದ್ಧಿಯನ್ನಷ್ಟೇ ಕೇಳುವಂತೆ ತರಬೇತಿ ಹೊಂದಿರಬೇಕಾಗುತ್ತದೆ. ಒಳ್ಳೆಯ ಸಲಹೆಯಿದ್ದರೆ ಮತ್ತದು ನಮ್ಮ ಚರ್ಯೆಗೆ ಒಪ್ಪುವಂತಿದ್ದರಷ್ಟೇ ಅನುಸರಿಸಬೇಕೇ ಹೊರತು ಇತರರಿಗೆಲ್ಲಿ ನೋವಾಗುವುದೋ ಎಂದು ಒತ್ತಾಯದಲ್ಲಿ ಹೇರಿಸಿಕೊಳ್ಳಬಾರದೆಂಬುದನ್ನೂ ಗಮನಿಸಬೇಕು.

ಅನುಕರಣೆಯೋ! ಅನುಸರಣೆಯೋ!:
ಈ ಎರಡೂ ಪದವನ್ನು ಏಕಾರ್ಥದಲ್ಲಿ ಕಲ್ಪಿಸಿಕೊಂಡು ಅನುಕರಿಸುವುದೋ! ಅನುಸರಿಸುವುದೋ! ಎಂಬ ಗೊಂದಲದಲ್ಲೇ ಬಹಳ ಸಲ ಅಪ್ಪ ನೆಟ್ಟಆಲದ ಮರದ ನೇಣಿನಂತಾಗುತ್ತೇವೆ ನಾವು. ಅನುಕರಿಸುವುದೆಂಬುದು ಯಥಾವತ್ ನಕಲಾದುದರಿಂದ ಯಾರೋ ಹೇಗೋ ಇದ್ದಾರೆಯೆಂದು ನಾನೂ ಹಾಗಿರಬೇಕು ಎಂದು ನಕಲಿಸಲು ಹೊರಟರೆ ಅದು ಸೋಂಬೇರಿತನಕ್ಕಿಂತ ದೊಡ್ಡ ಅಪರಾಧ ಮಾತ್ರವಲ್ಲದೆ ಒಬ್ಬನ ಭೌತಿಕ ಯಥಾಪ್ರತಿಯನ್ನಾದರೂ ಸೃಷ್ಟಿಸಬಹುದೇನೋ ಆದರೆ ಮನಸಿನ ತದ್ರೂಪಿಯನ್ನು ಹುಟ್ಟು ಹಾಕಲು ಸಾಧ್ಯವೇ? ಯೋಚಿಸಿ ನೋಡಿ. ಹಾಗಿದ್ದಾಗ ಅನುಕರಣೆಯೆಂಬ ನಕಲಿಸುವ ಕಾರ್ಯ ಮನಕ್ಕೆಲ್ಲಿ ಬರಬೇಕು!?

ಅನುಸರಣೆ ಇದಕ್ಕಿಂತ ವಿಭಿನ್ನ. ಇಲ್ಲಿ ನಕಲಿಸುವ ಪ್ರಕ್ರಿಯೆಯಿಲ್ಲ ಬದಲಾಗಿ ತನಗಿಷ್ಟವಾದ ವ್ಯಕ್ತಿ ಅಥವಾ ವಿಷಯವನ್ನು ಹಿಂಬಾಲಿಸಿ ಅವರಂತೆ ತಾನಾಗಬೇಕೆಂಬ ತುಡಿತದ ದಾರಿ ಮುಕ್ತವಾಗಿರುತ್ತದೆ ಹಾಗೂ ನಾವು ಅನುಸರಿಸುವ ಹಾದಿ ಇನ್ನೊಬ್ಬನ ಆಯ್ಕೆಯಾಗಿರದೆ ಸ್ವಪ್ರೇರಣೆಗೆ ಸ್ಫೂರ್ತಿಯೂ ಹೌದು. ನಾವು ಅನುಸರಿಸುವ ಮಾರ್ಗ ಮಾತ್ರ ಸ್ವಚ್ಛ ಶುದ್ಧವಾಗಿ ಸಮಾಜ ಒಪ್ಪುವಂತಿರಬೇಕು ಎನ್ನುವುದಷ್ಟೇ ಅನುಸರಣೆಯ ನಿಯಮ.

ಬದುಕಿನಲ್ಲಿ ನಿತ್ಯ ಹೊಸತನಗಳು ಇರಲೇಬೇಕು ಹಾಗೂ ನಾವು ಅವುಗಳನ್ನು ಒಪ್ಪಿಕೊಳ್ಳಲೇಬೇಕು ಯಾಕೆಂದರೆ ನಿಂತ ನೀರಿಗೂ ತೆಳುವಾದ ಒಂದು ಹರಿವಿದೆ. ಇದನ್ನು ಒಪ್ಪಿ ಅನುಕರಿಸದೆಯೇ ಅನುಸರಿಸಿಕೊಂಡು ಸೈರಿಸಿಕೊಂಡು ಮುಂದೆ ನಡೆದರಷ್ಟೇ ಅಪ್ಪ ನೆಟ್ಟ ಆಲದ ಮರಕ್ಕೆ ಕಟ್ಟೆಯನು ಕಟ್ಟಿ ಕುಳಿತುಕೊಳ್ಳಬಹುದು ಅದಲ್ಲವಾದರೆ ಮರದ ಬಿಳಲುಗಳೇ ಹಾವಿನಂತೆ ಭಾಸವಾಗುವುದು ಏನಂತೀರಿ?

ಅಕ್ಷತಾರಾಜ್ ಪೆರ್ಲ

Related Articles

Leave a Reply

Your email address will not be published. Required fields are marked *

error: Content is protected !!