ಮುಂಬೈ: ಕಾಲಕಾಲಕ್ಕೆ ತಂತ್ರಜ್ಞಾನವನ್ನು ಅಪ್ಡೇಟ್ ಮಾಡುವ ಮೂಲಕ ಯೂಸರ್ ಫ್ರೆಂಡ್ಲಿಯಾಗಿರುವ ವಾಟ್ಸ್ಆ್ಯಪ್ ಇದೀಗ ದೊಡ್ಡ ಗ್ರೂಪ್ಗಳಿಗೆಂದೇ ಹೊಸ ವಾಯ್ಸ್ ಚಾಟ್ ಫೀಚರ್ ಅನ್ನು ಪರಿಚಯಿಸುತ್ತಿದೆ. ವಾಟ್ಸ್ಆ್ಯಪ್ ಹೊಸ ವಾಯ್ಸ್ ಚಾಟ್ ಫೀಚರ್ ಈಗಾಗಲೇ ಅಸ್ತಿತ್ವದಲ್ಲಿರುವ ಗ್ರೂಪ್ ಕಾಲ್ಗೆ ಸರಿಸಮನಾಗಿ ಇರಲಿದೆ. ಆದರೆ, ಗ್ರೂಪ್ನ ಪ್ರತಿಯೊಬ್ಬ ಮೆಂಬರ್ನ ಮೊಬೈಲ್ನಲ್ಲಿಯೂ ರಿಂಗ್ ಆಗುವುದಿಲ್ಲ. ಇನ್ ಚಾಟ್ ಪಾಪ್ಅಪ್ ನೊಟಿಫಿಕೇಷನ್ ಬರಲಿದ್ದು, ಸದ್ದಿಲ್ಲದೇ ವಾಯ್ಸ್ ಚಾಟ್ನಲ್ಲಿ ಸೇರಿಕೊಳ್ಳಬಹುದು. ಹೊಸ ವಾಯ್ಸ್ ಚಾಟ್ ಫೀಚರ್ ಆರಂಭಿಸಲು ಬಳಕೆದಾರರು ಮೊದಲಿಗೆ ಗ್ರೂಪ್ ಚಾಟ್ ಅನ್ನು ತೆರೆಯಬೇಕು. ನಂತರ ಸ್ಕ್ರೀನ್ನ ಮೇಲ್ಭಾಗದ ಬಲಬದಿಯಲ್ಲಿರುವ ನೀಲಿ ಬಣ್ಣದ ವಾಯ್ಸ್ ಚಾಟ್ ಐಕಾನ್ ಅನ್ನು tap ಮಾಡಬೇಕು. ನಂತರ ಸಂಭಾಷಣೆ ಆರಂಭಿಸಲು ‘Start Voice Chat’ ಆಯ್ಕೆಯನ್ನು tap ಮಾಡಬೇಕು. ಸಂಭಾಷಣೆ ಆರಂಭವಾದ ಬಳಿಕ ಗ್ರೂಪ್ನ ಸದಸ್ಯರು ಪುಷ್ ನೊಟಿಫಿಕೇಷನ್ ಪಡೆಯುತ್ತಾರೆ.
ಬಳಕೆದಾರರು ತಮಗೆ ಬೇಕೆನಿಸಿದಾಗ ಇತರರಿಗೆ ಅಡ್ಡಿಯಾಗದಂತೆ ಸದ್ದಿಲ್ಲದೇ ವಾಯ್ಸ್ ಚಾಟ್ಗೆ ಸೇರಿಕೊಳ್ಳಬಹುದು ಮತ್ತು ನಿರ್ಗಮಿಸಬಹುದಾಗಿದೆ. ಚಾಟ್ ಸ್ಕ್ರೀನ್ನ ಮೇಲ್ಭಾಗದಲ್ಲಿ (ಚಾಟ್ ಆ್ಯಕ್ಟೀವ್ ಆಗಿದ್ದಾಗ) ಚಾಟ್ ಕಂಟ್ರೋಲ್ ಆಯ್ಕೆ ಲಭ್ಯವಿರಲಿದೆ. ಚಾಟ್ನಲ್ಲಿ ಭಾಗಿಯಾಗಿರುವವರು ಮತ್ತು ಕೇಳುತ್ತಿರುವವರಿಗೆ ಟೆಕ್ಷ್ಟ್ ಮೆಸೇಜ್ ಮಾಡಲು ಅವಕಾಶವಿರುತ್ತದೆ. ಚಾಟ್ನಲ್ಲಿ ಭಾಗವಹಿಸಿರುವವರು ಸ್ಕ್ರೀನ್ನ ಕೆಳಭಾಗದಲ್ಲಿ ಗೋಚರಿಸುವ ಬ್ಯಾನರ್ ಮೂಲಕ ಚಾಟ್ನಲ್ಲಿರುವವರ ಪ್ರೊಫೈಲ್ಗಳನ್ನು ನೋಡಬಹುದಾಗಿದೆ.