main logo

ವಿಜಯೇಂದ್ರ ಲೋಕಸಭೆ ಚುನಾವಣೆಯೇ ದೊಡ್ಡ ಸವಾಲು

ವಿಜಯೇಂದ್ರ ಲೋಕಸಭೆ ಚುನಾವಣೆಯೇ ದೊಡ್ಡ ಸವಾಲು

ಬೆಂಗಳೂರು: ಬಿಜೆಪಿ ಹೈಕಮಾಂಡ್‌ ಅಳೆದೂ ಸುರಿದೂ ಕೊನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಕರ್ನಾಟಕ ಬಿಜೆಪಿಯನ್ನು ಮುನ್ನಡೆಸುವ ಚುಕ್ಕಾಣಿ ನೀಡಿದೆ. ಈ ಮೂಲಕ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನನ್ನು ಆರಿಸದ ಪಕ್ಷ ಎಂಬ ಟೀಕಾಕಾರರ ಬಾಯಿ ಮುಚ್ಚಿಸಿದೆ. ಮಗನಿಗೆ ಪಕ್ಷದಲ್ಲಿ ಆಯಕಟ್ಟಿನ ಹುದ್ದೆ ಕೊಡಿಸಬೇಕೆನ್ನುವ ಯಡಿಯೂರಪ್ಪನವರ ಆಶೆಯೂ ಈ ಮೂಲಕ ಈಡೇರಿದೆ.
ಹಾಗೆಂದು ವಿಜಯೇಂದ್ರ ಮುಂದಿರುವುದು ಮುಳ್ಳಿನ ಹಾದಿ ಎನ್ನುವುದು ನೆನಪಿಟ್ಟುಕೊಳ್ಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಮತ್ತು ವ್ಯವಸ್ಥಿತ ಹೋರಾಟದಿಂದಾಗಿ ಮಣ್ಣುಮುಕ್ಕಿ ನಿಸ್ತೇಜಗೊಂಡಿರುವ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಬಹುದೊಡ್ಡ ಜವಾಬ್ದಾರಿ ವಿಜಯೇಂದ್ರ ಅವರ ಹೆಗಲೇರಿದೆ. ಈ ಗುರಿಯತ್ತ ಸಾಗಬೇಕಾದರೆ ವಿಜಯೇಂದ್ರ ಎದುರಿಸಬೇಕಾದ ಎಡರುತೊಡರುಗಳು ಒಂದೆರಡಲ್ಲ. ಸದ್ಯಕ್ಕೇನೂ ರಾಜಕೀಯದ ಪಳಗಿದ ಹುಲಿ ಯಡಿಯೂರಪ್ಪನವರ ಮಾರ್ಗದರ್ಶನ ಸಿಗಬಹುದು. ಆದರೆ ಇದರ ಜತೆಗೆ ವಿಜಯೇಂದ್ರ ತನ್ನ ಮುತ್ಸದ್ದಿತನವನ್ನೂ ತೋರಿಸಿದರೆ ಈ ಹಾದಿ ಸುಗಮವಾಗಬಹುದು.

ವಿಜಯೇಂದ್ರಗೆ ಪಕ್ಷದ ಹೊಣೆ ವಹಿಸುವಾಗ ಬಿಜೆಪಿ ಹೈಕಮಾಂಡ್‌ ಬಹಳ ಆಲೋಚನೆ ಮಾಡಿದೆ ಎನ್ನುವುದು ನಿಚ್ಚಳ. ಒಂದೆಡೆ ಕರ್ನಾಟಕದ ಜಾತಿ ಸಮೀಕರಣ, ಇನ್ನೊಂದೆಡೆ ಯಡಿಯೂರಪ್ಪ ಅವರ ಪ್ರಭಾವಲಯ, ಮತ್ತೊಂದೆಡೆ ಯುವ ನಾಯಕತ್ವದ ಬೇಡಿಕೆ…ಹೀಗೆ ಎಲ್ಲ ಆಯಾಮಗಳಲ್ಲೂ ಚಿಂತನೆ ನಡೆಸಿ ಮಹತ್ವದ ಹೊಣೆಯನ್ನು ವಿಜಯೇಂದ್ರ ಹೆಗಲಿಗೆ ವರ್ಗಾಯಿಸಿದೆ. ಕಿರಿಯ ಪ್ರಾಯದಲ್ಲಿ ಹಿರಿದಾದ ಜವಾಬ್ದಾರಿ ವಿಜಯೇಂದ್ರಗೆ ಸಿಕ್ಕಿದೆ.
ಮೊದಲಾಗಿ ವಿಜಯೇಂದ್ರಗೆ ಎದುರಾಗಲಿರುವುದು ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಸವಾಲು. ಈಗಾಗಲೇ ಎಲ್ಲ ಪಕ್ಷಗಳು ಚುನಾವಣೆ ತಯಾರಿಯಲ್ಲಿ ತೊಡಗಿವೆ. ಎದುರಾಳಿ ಕಾಂಗ್ರೆಸ್‌ ಈ ಸಲ ಕರ್ನಾಟಕದಲ್ಲಿ ಕನಿಷ್ಠ 20 ಸೀಟನ್ನಾದರೂ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇದನ್ನು ಎದುರಿಸಲು ವಿಜಯೇಂದ್ರ ಯಾವ ಕಾರ್ಯತಂತ್ರ ರೂಪಿಸುತ್ತಾರೆ ಎನ್ನುವುದು ಅವರ ಮುಂದಿನ ನಡೆಯ ದಿಕ್ಸೂಚಿಯಾಗಲಿದೆ. ಬರೀ ಜಾತಿ ಬಲದಿಂದ ಮಹತ್ವದ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ವಿಧಾನಸಭೆ ಚುನಾವಣೆ ಕಾಲದಲ್ಲಿ ಶುರುವಾದ ಬಿಜೆಪಿಯ ಒಳಜಗಳ ಇನ್ನೂ ಮುಗಿದಿಲ್ಲ. ಅತ್ತ ಕಾಂಗ್ರೆಸ್‌ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ತಯಾರುಗೊಳಿಸುತ್ತಿದ್ದರೆ ಇತ್ತ ಬಿಜೆಪಿಯಲ್ಲಿ ಒಂದು ಸುತ್ತಿನ ತಯಾರಿಯೂ ಆಗಿಲ್ಲ ಎನ್ನುವ ವಾಸ್ತವ ವಿಜಯೇಂದ್ರ ಮುಂದಿರುವ ಸವಾಲು ಎಷ್ಟು ದೊಡ್ಡದು ಎನ್ನುವುದನ್ನು ಸೂಚಿಸುತ್ತದೆ.
ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಸಮಸ್ಯೆ ಎದುರಿಸುತ್ತಿದೆ. ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರಿರುವವರ ಪೈಕಿ ಕೆಲವರು ಈಗ ಬೇಲಿ ಮೇಲೆ ಕುಳಿತು ಜಿಗಿಯಲು ಯಾವ ಭಾಗ ಅನುಕೂಲವಾಗಿದೆ ಎಂದು ನಿರೀಕ್ಷಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ

ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ, ಅಶೋಕ್‌, ಲಿಂಬಾವಳಿ ಮುಂತಾದವರಿಗೆ ವಿಜಯೇಂದ್ರ ಕೈಕೆಳಗೆ ಕೆಲಸ ಮಾಡುವುದು ಸಮಾಧಾನ ಕೊಡಬಹುದು ಎಂದು ನಿರೀಕ್ಷಿಸುವಂತಿಲ್ಲ.
ವಿಜಯೇಂದ್ರ ಆಯ್ಕೆಯಿಂದ ಪರಂಪರಾಗತವಾಗಿ ಬಿಜೆಪಿ ಬೆಂಬಲಕ್ಕಿರುವ ಬಲಿಷ್ಠ ಲಿಂಗಾಯತ ಸಮುದಾಯವನ್ನೇನೋ ಸಮಾಧಾನಪಡಿಸಿದ್ದಾಯಿತು. ಇಷ್ಟೇ ಬಲಿಷ್ಠರಾಗಿರುವ ಒಕ್ಕಲಿಗ ಸಮುದಾಯಕ್ಕೂ ಪ್ರಾತಿನಿಧ್ಯ ಸಿಗಬೇಕು. ಮುಂದಕ್ಕೆ ವಿಪಕ್ಷ ನಾಯಕನ ಆಯ್ಕೆ ಮಾಡುವಾಗ ಈ ಅಂಶ ಮುನ್ನೆಲೆಗೆ ಬರುತ್ತದೆ.

ಈ ಸಲ ಬಿಜೆಪಿ-ಜೆಡಿಎಸ್‌ ಚುನಾವಣೆಗಾಗಿ ಹೊಂದಾಣಿಕೆ ಮಾಡಿಕೊಂಡಿದೆ. ಇದು ಬಹಳ ನಾಜೂಕಿನ ಮೈತ್ರಿ. ಎಚ್‌.ಡಿ.ಕುಮಾರಸ್ವಾಮಿ ಸದಾ ಮೈಗೆ ಎಣ್ಣೆ ಸವರಿಕೊಂಡೇ ರಾಜಕೀಯ ಮಾಡುವ ಚಾಣಾಕ್ಷ. ಈ ಮೈತ್ರಿಯನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ವಿಜಯೇಂದ್ರ ಅವರ ರಾಜಕೀಯ ಪಕ್ವತೆಗೆ ಅಗ್ನಿಪರೀಕ್ಷೆಯೇ ಇದೆ. ಸೀಟು ಹಂಚಿಕೆಯಿಂದಲೇ ವಿಜಯೇಂದ್ರಗೆ ಈ ಅಗ್ನಿಪರೀಕ್ಷೆ ಎದುರಾಗಲಿದೆ.
ಎಲ್ಲದಕ್ಕೂ ಮುಖ್ಯವಾಗಿ ಬಿಜೆಪಿಯ ಒಳಜಗಳವನ್ನು ಪರಿಹರಿಸಿ ಪಕ್ಷವನ್ನು ಏಕಸೂತ್ರದಲ್ಲಿ ಹಿಡಿದಿಡುವ ಕೆಲಸ ಮೊದಲು ಆಗಬೇಕು. ಇದರಲ್ಲಿ ವಿಜಯೇಂದ್ರ ಯಶಸ್ವಿಯಾದರೆ ಅವರು ಅರ್ಧ ದಾರಿ ಕ್ರಮಿಸಿದಂತೆ. ಬಿಜೆಪಿ ವರಿಷ್ಠರು ಕರ್ನಾಟಕವನ್ನು ಪಕ್ಷ ಸಂಘಟನೆ ನಿಟ್ಟಿನಲ್ಲಿ ಕರ್ನಾಟಕವನ್ನು ಪ್ರಯೋಗ ಶಾಲೆ ಮಾಡಿಕೊಂಡಿದೆ ಎನ್ನುವುದು ವಿಜಯೇಂದ್ರ ಆಯ್ಕೆಯಲ್ಲಿ ಸಾಬೀತಾಗುತ್ತದೆ. ಮೊದಲ ಬಾರಿ ಶಾಸಕನಾಗಿರುವ ಯುವ ನಾಯಕನನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡುವ ಮೂಲಕ ವರಿಷ್ಠರು ತಕ್ಷಣದ ಫಲಿತಾಂಶಕ್ಕಿಂತಲೂ ದೀರ್ಘಾವಧಿಯಲ್ಲಿ ಪಕ್ಷವನ್ನು ಗಟ್ಟಿಗೊಳಿಸುವುದು ಮುಖ್ಯ ಎನ್ನುವುದನ್ನು ಮನಗಂಡಿದ್ದಾರೆ ಎನ್ನುವುದು ನಿಜ. ರಾಜಕೀಯ ವ್ಯವಸ್ಥೆ ಸದಾ ಚಲನಶೀಲವಾಗಿರಬೇಕು, ಹಳೆ ನೀರು ಕೊಚ್ಚಿ ಹೋಗಿ ಹೊಸ ನೀರು ವ್ಯವಸ್ಥೆಗೆ ಸೇರಿಕೊಂಡಾಗಲೇ ಈ ಚಲನಶೀಲತೆ ನಿರಂತರವಾಗಿರುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ವಿಜಯೇಂದ್ರ ಅತ್ಯಂತ ಸೂಕ್ತ ಆಯ್ಕೆಯೇ ಸರಿ.

ಇನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲಿನಿಂದಲೂ ಯಡಿಯೂರಪ್ಪ ಅವರ ಕುಟುಂದ ವಿರುದ್ಧ ಆರೋಪಗಳನ್ನು, ಟೀಕೆಗಳನ್ನು ಮಾಡುತ್ತಾ ಬಂದವರು. ಅವರು ವಿಜಯೇಂದ್ರಗೆ ಹೇಗೆ ಸಹಕಾರ ನೀಡಲಿದ್ದಾರೆ? ಅಥವಾ ಅವರ ಸವಾಲನ್ನು ವಿಜಯೇಂದ್ರ ಹೇಗೆ ಮೆಟ್ಟಿನಿಲ್ಲಲಿದ್ದಾರೆ ಎಂಬುದು ಕೌತುಕದ ವಿಷಯವಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!