ಮಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರ ಕರಾಮತ್ತು ಹೆಚ್ಚುತ್ತಿದೆ. ಸುಶಿಕ್ಷತರೇ ಇದಕ್ಕೆ ಬಲಿಯಾಗುತ್ತಿದ್ದು, ಈ ಬಗ್ಗೆ ಅರಿವಿದ್ದವರನ್ನು ಹೈಟೆಕ್ ವಂಚಕರು ತಮ್ಮ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಮಂಗಳೂರಿನಲ್ಲಿ ನಿವೃತ್ತ ಪ್ರಿನ್ಸಿಪಾಲ್ ಆಗಿರುವ ಮಹಿಳೆಯೊಬ್ಬರು ಬರೋಬ್ಬರಿ 72 ಲಕ್ಷ ಕಳಕೊಂಡಿದ್ದಾರೆ.
ಆ ಮಹಿಳೆ ಮಂಗಳೂರಿನಲ್ಲಿ ಪ್ರಥಮ ದರ್ಜೆ ಸರಕಾರಿ ಕಾಲೇಜಿನಲ್ಲಿ ವರ್ಷದ ಹಿಂದಷ್ಟೇ ನಿವೃತ್ತರಾಗಿದ್ದವರು, ಇತ್ತೀಚೆಗೆ ಒಂದು ತಿಂಗಳ ಹಿಂದೆ ಆ ಮಹಿಳೆಗೆ ಇಬ್ಬರು ಅಪರಿಚಿತರು ವಾಟ್ಸಪ್ ನಲ್ಲಿ ಪರಿಚಯ ಆಗಿದ್ದರು. ಮೆಸೇಜ್, ಕರೆ ಮಾಡುತ್ತ ತುಂಬ ಆತ್ಮೀಯರಂತೆ ನಟಿಸುತ್ತಿದ್ದರು. ತಮ್ಮನ್ನು ಲಾಟರಿ ಕಂಪನಿಯ ಪ್ರತಿನಿಧಿಗಳೆಂದು ಹೇಳಿಕೊಂಡು ಪರಿಚಯಿಸಿದ್ದು, ನಿಮಗೊಂದು ದೊಡ್ಡ ಮೊತ್ತದ ಲಾಟರಿ ಬರಲಿಕ್ಕಿದೆ ಎಂದು ಮಹಿಳೆಯನ್ನು ನಂಬಿಸಿದ್ದರು.
ದಿನವೂ ಫೋನ್ ಕರೆ ಮಾಡುತ್ತ ಅವರಿಬ್ಬರು ಎಷ್ಟು ನಂಬಿಸಿದ್ದರೆಂದರೆ, ಮನೆಯ ಸದಸ್ಯರೇನೋ ಎನ್ನುವಂತೆ ವರ್ತಿಸುತ್ತಿದ್ದರು. ಇತ್ತೀಚೆಗೆ, ಖತರ್ನಾಕ್ ಯುವಕರು ಮಹಿಳೆಯನ್ನು ನಂಬಿಸಿ, ನಿಮಗೆ ಇನ್ನೇನು ಕೆಲವೇ ದಿನಗಳಲ್ಲಿ ಲಾಟರಿ ಹಣ ಅಕೌಂಟಿಗೆ ಬರುತ್ತೆ ಅದು ಬಂದಾಗ ನಿಮಗೆ ಗೊತ್ತಾಗಲ್ಲ. ನೀವು ಬೇರೆ ಕೆಲಸದಲ್ಲಿ ಬಿಝಿ ಇದ್ದರೆ, ಬ್ಯಾಂಕ್ ಖಾತೆಯಿಂದ ಮೆಸೇಜ್ ಬಂದರೂ ತಿಳಿಯಲ್ಲ ಅದರ ಪ್ರೊಸೆಸಿಂಗ್ ಇತ್ಯಾದಿ ಕೆಲಸಕ್ಕೆ ಒಂದಷ್ಟು ಕೆಲಸ ಇರುತ್ತೆ. ಹಾಗಾಗಿ, ನಿಮ್ಮ ಬ್ಯಾಂಕ್ ಖಾತೆಗೆ ನಮ್ಮದೇ ಮೊಬೈಲ್ ನಂಬರನ್ನು ಸೇರಿಸಿದ್ರೆ ಎಲ್ಲವನ್ನೂ ನೋಡಿಕೊಳ್ಳುತ್ತೇವೆ ಎಂದು ಉಪಾಯ ಹೇಳಿಕೊಟ್ಟಿದ್ದರು. ನಿಮಗೆ ಹಣ ಬಂದೊಡನೆ ನಾವು ನಿಮಗೆ ತಿಳಿಸುತ್ತೇವೆ ಎಂದಿದ್ದರು. ತಮ್ಮನ್ನು ಪಾಂಡೆ ಮತ್ತು ಮಿತ್ತಲ್ ಪರಿಚಯಿಸಿದ್ದರು. ಅವರನ್ನು ಪೂರ್ತಿ ನಂಬಿದ್ದ ಮಹಿಳೆ, ಅವರು ಹೇಳಿದಂತೆ ತನ್ನಲ್ಲಿದ್ದ ಆರ್ಯ ಸಮಾಜ ರಸ್ತೆಯ ಎಸ್ ಬಿಐ ಮತ್ತು ಬಿಜೈ ಇಂಡಿಯನ್ ಬ್ಯಾಂಕ್ ಖಾತೆಗಳಿಗೆ ಅವರಲ್ಲೊಬ್ಬನ ಮೊಬೈಲ್ ನಂಬರನ್ನು ಸೇರಿಸಿದ್ದರು.
ಮೊನ್ನೆ ಅಕ್ಟೋಬರ್ 26ರಂದು ಎಸ್ ಬಿಐ ಖಾತೆಗೆ, ಮಹಿಳೆಯ ಸರ್ವಿಸ್ ಸಂಬಂಧಪಟ್ಟ ಪಿಂಚಣಿ ಮೊತ್ತ 72 ಲಕ್ಷ ರೂಪಾಯಿ ಹಣ ಪಾವತಿ ಆಗಿತ್ತು. ಆದರೆ, ಈ ಮಾಹಿತಿ ಮಹಿಳೆಗೆ ತಿಳಿದಿರಲಿಲ್ಲ. ಮೊಬೈಲ್ ನಂಬರ್ ಬೇರೆಯಾಗಿದ್ದರಿಂದ ಮೆಸೇಜೂ ಬಂದಿರಲಿಲ್ಲ. ಕೆಲವು ದಿನಗಳ ನಂತರ ಮಹಿಳೆಗೆ ಪಿಂಚಣಿ ಮೊತ್ತ ಬ್ಯಾಂಕಿಗೆ ಪಾವತಿ ಆಗಿದ್ದ ಬಗ್ಗೆ ತಿಳಿದು ಚೆಕ್ ಮಾಡಲು ಬ್ಯಾಂಕಿಗೆ ತೆರಳಿದ್ದರು. ಅದರಂತೆ, ಬ್ಯಾಂಕಿಗೆ ಹೋಗಿ ನೋಡಿದಾಗ, ಪೂರ್ತಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ.