ಬಂಟ್ವಾಳ: ಸಾಲದ ಬಾಧೆಯಿಂದ ಮಾನಸಿಕವಾಗಿ ನೊಂದಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸಜೀಪದಲ್ಲಿ ನಡೆದಿದೆ.
ಸಜೀಪ ಪಡು ಗ್ರಾಮದ ತಲೆಮೊಗರು ನಿವಾಸಿ ಸನತ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಸನತ್ ಅವರು ಮೀನು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಮೀನು ಮಾರಾಟಕ್ಕಾಗಿ ಇತ್ತೀಚಿಗೆ ಸಾಲ ಮಾಡಿ ಟೆಂಪೋ ರಿಕ್ಷಾವನ್ನು ಖರೀದಿ ಮಾಡಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಮೀನು ವ್ಯಾಪಾರದಲ್ಲಿ ಹಣ ಕಳೆದುಕೊಂಡು ವಾಹನ ಖರೀದಿಗಾಗಿ ಮಾಡಿದ್ದ ಬ್ಯಾಂಕ್ ಸಾಲದ ಕಂತನ್ನು ಕಟ್ಟಲು ಸಾಧ್ಯವಾಗಿರಿಲ್ಲ ಎಂದು ಹೇಳಲಾಗಿದೆ.
ಇನ್ನು ಸಾಲದ ಕಂತನ್ನು ಕಟ್ಟಲು ಸಾಧ್ಯವಾಗದೇ ಟೆಂಪೋ ವನ್ನು ಕೂಡ ಮಾರಾಟ ಮಾಡಿದ್ದ ಎನ್ನಲಾಗಿದೆ. ಜೊತೆಗೆ ಕೋಳಿ ಅಂಕಕ್ಕೆ ಹೋಗುತ್ತಿದ್ದ ಈತ ಅಲ್ಲಿಯೂ ಹಣ ಕಳೆದುಕೊಂಡು ಮಾನಸಿಕವಾಗಿ ನೊಂದುಕೊಂಡಿದ್ದು, ಸಾಲದ ಬಾಧೆಯಿಂದ ಹೊರಬರಲು ಅಸಾಧ್ಯ ಪರಿಸ್ಥಿತಿಯಲ್ಲಿದ್ದ ಈತ ಮನೆಯವರು ಹತ್ತಿರದ ಭಜನಾ ಮಂದಿರದಲ್ಲಿ ನಡೆಯುವ ನವರಾತ್ರಿ ಪೂಜೆಗೆ ತೆರಳಿದ್ದ ವೇಳೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.
ಪೂಜೆ ಮುಗಿಸಿಕೊಂಡು ಮನೆಗೆ ಬಂದ ವೇಳೆ ಈತನ ಕೋಣೆಗೆ ಬಾಗಿಲು ಹಾಕಿಕೊಂಡಿದ್ದನ್ನು ಗಮನಿಸಿ ಕರೆದಾಗ ಈತನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹಾಗಾಗಿ ಬಾಗಿಲು ಮುರಿದು ನೋಡಿದಾಗ ಈತ ಪಕ್ಕಾಸಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.