ನಟಿ ಸಮಂತಾ ರುತ್ ಪ್ರಭು ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಫೋಟೋ ವೈರಲ್ ಆಗಿದೆ. ನಟಿ ಸದ್ಯ ಆರೋಗ್ಯ ಸರಿಯಿಲ್ಲದ ಕಾರಣಕ್ಕಾಗಿ ಸಿನಿಮಾ ಕೆಲಸಗಳಿಂದ ದೀರ್ಘ ಬ್ರೇಕ್ ಪಡೆದುಕೊಂಡಿದ್ದಾರೆ.
ಸಮಂತಾ ರುತ್ ಪ್ರಭು ಅವರು ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಎದುರಾದ ಆರೋಗ್ಯದ ಸಮಸ್ಯೆಗೆ ಯಾವೆಲ್ಲ ರೀತಿಯ ಚಿಕಿತ್ಸೆ ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸಮಂತಾ ಅವರಿಗೆ ಮಯೋಸೈಟಿಸ್ ಕಾಯಿಲೆ ಇದೆ. ಅದಕ್ಕೆ ಅವರು ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಖುಷಿ’ ಸಿನಿಮಾ ಮತ್ತು ‘ಸಿಟಾಡೆಲ್’ ವೆಬ್ ಸಿರೀಸ್ನ ಭಾರತದ ವರ್ಷನ್ ಶೂಟಿಂಗ್ ಬಳಿಕ ಸಮಂತಾಗೆ ಆರೋಗ್ಯ ಕೈಕೊಟ್ಟಿತು. ಸದ್ಯಕ್ಕಂತೂ ಸಮಂತಾ ರುತ್ ಪ್ರಭು ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಈ ಬಾರಿ ಅವರು ಚಿಕಿತ್ಸೆಗಾಗಿ ಹಲವು ತಿಂಗಳ ಕಾಲ ಸಮಯ ಮೀಸಲಿಟ್ಟಿದ್ದಾರೆ. ಸಂಪೂರ್ಣ ಗುಣಮುಖರಾಗಿ ಬಂದ ನಂತರವೇ ಅವರು ಹೊಸ ಚಿತ್ರಕ್ಕೆ ಸಹಿ ಮಾಡಲಿದ್ದಾರೆ. ಚಿಕಿತ್ಸೆಯ ನಡುವೆಯೇ ಅವರು ಅನೇಕ ದೇಶಗಳಿಗೆ ತೆರಳುತ್ತಿದ್ದಾರೆ. ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಮಾನಸಿಕ ನೆಮ್ಮದಿಯ ಕಡೆಗೂ ಗಮನ ಹರಿಸುತ್ತಿದ್ದಾರೆ.
ಆದಷ್ಟು ಬೇಗ ಸಮಂತಾ ರುತ್ ಪ್ರಭು ಅವರು ಗುಣಮುಖರಾಗಿ ಬರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.