ನವದೆಹಲಿ: ನಮಗೆ ಮನೆಯಲ್ಲಿ ಮಾಡಿದ ತಿಂಡಿಗಳಿಗಿಂತ ರಸ್ತೆ ಬದಿ ತಿಂಡಿಗಳೇ ಅತಿಹೆಚ್ಚು ಪ್ರಿಯ. ಅದನ್ನೆ ಎಲ್ಲರೂ ಮುಗಿಬಿದ್ದು ತಿನ್ನುತ್ತಾರೆ. ಆದರೆ ರಸ್ತೆ ಬದಿ ಮಾರುವ ತಿಂಡಿ ತೀರ್ಥಗಳನ್ನು ತಯಾರಿಸುವ ವಿಧಾನವನ್ನು ಒಮ್ಮೆ ಗಮನವಿಟ್ಟು ನೋಡಿದರೆ ಅದನ್ನು ನಾವೆಂದು ತಿನ್ನುವುದಿಲ್ಲ. ಅಂತಹುದೇ ಒಂದು ಕೊಳಕು ಗೋಬಿ ಮಂಚೂರಿ ಫ್ಯಾಕ್ಟರಿ ವಿಡಿಯೋವೊಂದು ಇಟರ್ ನೆಟ್ ನಲ್ಲಿ ವೈರಲ್ ಆಗಿದೆ. ಬೃಹತ್ ಪ್ರಮಾಣದಲ್ಲಿ ಗೋಬಿ ತಯಾರಿಸುವ ಫ್ಯಾಕ್ಟರಿ ಇದಾಗಿದ್ದು, ಯುವಕರ ಗುಂಪೊಂದು ಕ್ಯಾಬೇಜ್ ಅನ್ನು ಸಣ್ಣ ತುಂಡುಗಳಾಗಿ ಹೆಚ್ಚುತ್ತಿರುವುದು ವಿಡಿಯೋದಲ್ಲಿದೆ.
ಈ ವೇಳೆ ಕೆಲ ಕ್ಯಾಬೇಜ್ ತುಂಡುಗಳು ನೆಲದಲ್ಲಿ ಚೆಲ್ಲುತ್ತವೆ. ನಂತರ ಕಟ್ ಮಾಡಿದ ಕ್ಯಾಬೇಜ್ ಅನ್ನು ಕ್ರೇಟ್‌ಗಳಿಗೆ ಸರಣಿಯಂತೆ ತುಂಬಿಸಲಾಗುತ್ತದೆ. ಬಳಿಕ ಅದಕ್ಕೆ ವಿವಿಧ ಹಿಟ್ಟುಗಳನ್ನು ಮಿಶ್ರಣ ಮಾಡಲಾಗುತ್ತದೆ.
ಈ ವೇಳೆ ದೊಡ್ಡ ಪಾತ್ರೆಗಳಿಗೆ ಕ್ಯಾಬೇಜ್ ಹಾಕಿ ಬರಿಗೈಯಿಂದಲೇ ಅದನ್ನು ಮಿಕ್ಸ್ ಮಾಡಲಾಗುತ್ತದೆ. ಆ ಮಿಕ್ಸ್ ಮಾಡುವ ದೃಶ್ಯ ನೋಡಿದವರೆಂದೂ ಗೋಬಿ ತಿನ್ನುವುದು ಸಾಧ್ಯವೇ ಇಲ್ಲ. ನಂತರ ಯುವಕರು ಗೋಬಿ ಉಂಡೆ ತಯಾರಿಸಿ ಎಣ್ಣೆಯಲ್ಲಿ ಬಿಡುವುದು ವಿಡಿಯೋದಲ್ಲಿದೆ. ಇದಕ್ಕೆ ಜಾಲತಾಣದಲ್ಲಿ ಹಲವು ಪರ ವಿರೋಧ ಚರ್ಚೆಗಳು ನಡೆದಿವೆ.