main logo

ಬಿಜೆಪಿಯ ಶೇ 75 ರಷ್ಟು ಮಂದಿಗೆ ಜೆಡಿಎಸ್‌ ಮೈತ್ರಿ ಇಷ್ಟವಿಲ್ಲ ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಸದಾನಂದ ಗೌಡ

ಬಿಜೆಪಿಯ ಶೇ 75 ರಷ್ಟು ಮಂದಿಗೆ ಜೆಡಿಎಸ್‌ ಮೈತ್ರಿ ಇಷ್ಟವಿಲ್ಲ ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಸದಾನಂದ ಗೌಡ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ಪಕ್ಷದ ಮುಖಂಡರಲ್ಲಿ ಅಸಮಾಧಾನ ಹೇಳಿಕೆ ಪ್ರತಿಹೇಳಿಕೆ ಹೆಚ್ಚಾಗುತ್ತಿದೆ. ಇದೀಗ ಈ ಸಾಲಿಗೆ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿವಿ ಸದಾನಂದ ಗೌಡ ಸೇರಿದ್ದು, ಪಕ್ಷದ ರಾಜ್ಯ ನಾಯಕರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿಯಲ್ಲಿನ ಶೇ 75ರಷ್ಟು ಜನರಿಗೆ ಈ ಮೈತ್ರಿ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಪತ್ರಿಕೆಯೊಂದರ ಜೊತೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಬೇಕು ನಿಜ. ಆದರೆ, ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚಿಸದೆ, ಏಕಪಕ್ಷೀಯವಾಗಿ ಮೈತ್ರಿ ಮಾಡಿಕೊಂಡರೆ, ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದಿದ್ದಾರೆ.

ಇತ್ತೀಚೆಗಷ್ಟೇ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಚುನಾವಣೆ ಮುಗಿದು ನಾಲ್ಕು ತಿಂಗಳು ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆಯುತ್ತಿತ್ತು. ಇದೀಗ ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗುತ್ತದೆ. ಪಕ್ಷದಲ್ಲಿ ಒಕ್ಕಲಿಗ ನಾಯಕರ ಮಾತುಗಳಿಗೂ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.

ಪಕ್ಷವು ನನಗೆ ಎಲ್ಲವನ್ನೂ ನೀಡಿದೆ. ರಾಜ್ಯದಲ್ಲಿ ಅತ್ಯಂತ ಬಲಿಷ್ಠವಾಗಿದ್ದ ಪಕ್ಷಕ್ಕೆ ಈ ಸ್ಥಿತಿ ಬಂದಿರುವುದರ ಬಗ್ಗೆ ನೋವಿದೆ. ಅದನ್ನು ಸರಿಪಡಿಸಬೇಕು ಎಂಬುದಷ್ಟೇ ನನ್ನ ಆಗ್ರಹ. ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವಾಸ್ತವ ವಿಚಾರಗಳನ್ನು ಮಾತನಾಡಲು ನನಗೆ ಯಾವ ರೀತಿಯ ಭಯವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ನಾಲ್ಕು ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ ಪಕ್ಷದ ಪ್ರಮುಖರ ಸಭೆಯಲ್ಲಿಯೇ ಈ ವಿಚಾರವನ್ನು ನಾನು ಹೇಳಿದ್ದೇನೆ ಎಂದು ಸದಾನಂದ ಗೌಡ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!