ನವದೆಹಲಿ: 2000 ಮುಖಬೆಲೆಯ ನೋಟುಗಳನ್ನು ಆರ್.ಬಿ.ಐ. (RBI) ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಮಾಡಿದ ಬಳಿಕ ಇದುವರೆಗೆ 93% ನೋಟುಗಳು ವಾಪಾಸಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಮಾಹಿತಿ ನೀಡಿದೆ.
3.32 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ಮುಖಬೆಲೆಯ ನೋಟುಗಳು ಆ.31ರವರೆಗೆ ವಾಪಾಸಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವರ್ಷದ ಮೇ 19ರವರೆಗೆ ಒಟ್ಟಾರೆ 3.56 ಲಕ್ಷ ಕೋಟಿ ರೂಪಾಯಿಗಳಷ್ಟು 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿತ್ತು.
ಈ ವರ್ಷದ ಮೇ 19ರಂದು ಸೆಂಟ್ರಲ್ ಬ್ಯಾಂಕ್ (Reserve Bank of India) 2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಪ್ರಕಟಿಸಿತ್ತು.
‘ಆ.31, 2023ರವರೆಗೆ 3.32 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲಾಗಿದೆ ಮತ್ತು ಇದೇ ಅವಧಿಯಲ್ಲಿ 0.24 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಮಾರುಕಟ್ಟೆಯಲ್ಲಿ ಇನ್ನೂ ಚಲಾವಣೆಯಲ್ಲಿದೆ. ಈ ಮೂಲಕ 93% 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಮೇ.19, 2023 ರಿಂದ ಆ.31 2023ರ ಅವಧಿಯಲ್ಲಿ ಬ್ಯಾಂಕುಗಳಿಗೆ ವಾಪಾಸಾಗಿದೆ’ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು, ಪ್ರಮುಖ ಬ್ಯಾಂಕುಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯಿಂದ ತಿಳಿದುಬಂದಿರುವಂತೆ, ವಾಪಾಸಾಗಿರುವ ಒಟ್ಟು 2 ಸಾವಿರ ರೂಪಾಯಿ ಬ್ಯಾಂಕು ನೋಟುಗಳಲ್ಲಿ87% ಡಿಪಾಸಿಟ್ ರೂಪದಲ್ಲಿ ಜಮೆಯಾಗಿದ್ದರೆ ಉಳಿದಂತೆ ಅಂದಾಜು 13% ನೋಟುಗಳು ವಿನಿಮಯಕ್ಕೊಳಗಾಗಿವೆ.
ಜನರು ತಮ್ಮಲ್ಲಿರುವ 2 ಸಾವಿರ ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಗಳಿಗೆ ಹಿಂದಿರುಗಿಸಲು (ಡಿಪಾಸಿಟ್ ಅಥವಾ ವಿನಿಮಯ ಮಾಡಿಕೊಳ್ಳಲು) ಈ ತಿಂಗಳ (ಸೆಪ್ಟೆಂಬರ್) 30ರವರೆಗೆ ಅವಕಾಶ ನೀಡಲಾಗಿದೆ.