Site icon newsroomkannada.com

ಅಚ್ಚರಿಯಯಾದರೂ ಸತ್ಯ: ದನ ಕಾಯುವವನ ತಿಂಗಳ ಪಗಾರ 90 ಸಾವಿರ ರೂ.

ಕಲಬುರಗಿ: ಯಾವ ಕೆಲಸಕ್ಕೂ ಉಪಯೋಗ ಇಲ್ಲದವರನ್ನು ದನ ಕಾಯುವುದಕ್ಕೂ ಯೋಗ್ಯತೆ ಇಲ್ಲದವ ಎಂದು ಹೀಗಳೆಯುವುದನ್ನು ನಾವು ಕೇಳಿರುತ್ತೇವೆ. ಆದರೆ ಅದಕ್ಕೆ ವಿರುದ್ಧವಾದ ಸಂತಸದ ಸುದ್ದಿಯೊಂದು ಇಲ್ಲಿದೆ. ಸಾಫ್ಟ್‌ ವೇರ್‌ ಇಂಜಿನಿಯರ್‌ ಗಿಂತಲೂ ಹೆಚ್ಚಿನ ಸಂಬಳ ಪಡೆಯವ ದನ ಕಾಯುವವರಿದ್ದಾರೆ ಎಂದರೇ ನೀವು ನಂಬಲೇ ಬೇಕು. ಹೌದು ತಿಂಗಳಿಗೆ 90 ಸಾವಿರ ವೇತನ ಪಡೆಯುವ ದನ ಕಾಯುವವರ ಕುರಿತು ನಾವಿಲ್ಲಿ ಹೇಳ ಹೊರಟಿದ್ದೇವೆ.

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮ. ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಹಿಂದೆ ವ್ಯವಸಾಯವೇ ಮೂಲ ಕಸುಬಾಗಿತ್ತು. ಈಗ ಸಿಮೆಂಟ್‌ ಕಾರ್ಖಾನೆ ಪ್ರಾರಂಭವಾಗಿದ್ದು, ಅದಕ್ಕಾಗಿ ಗ್ರಾಮಸ್ಥರು ತಮ್ಮ ಜಮೀನು ನೀಡಿ ತಾವು ಇತರ ಕೆಲಸಗಳಲ್ಲಿ ತೊಡಗಿದ್ದಾರೆ. ಆದರೆ ಹಸು ಸಾಕಾಣಿಕೆಯನ್ನು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರತೀ ಮನೆಯಲ್ಲೂ ದನಕರುಗಳಿದ್ದು, ಗ್ರಾಮದಲ್ಲಿ ಸುಮಾರು 2 ಸಾವಿರ ರಾಸುಗಳಿವೆ.
ಕೆಲಸಕ್ಕೆ ತೆರಳುವ ಬಹುತೇಕ ಗ್ರಾಮಸ್ಥರಿಗೆ ಹಸುಕರು ಮೇಯಿಸಲು ಆಗುವುದಿಲ್ಲ. ಹೀಗಾಗಿ ಇದೇ ಗ್ರಾಮದ ಐದಾರು ಯುವಕರು ಸೇರಿ ಒಂದು ತಂಡ ಕಟ್ಟಿಕೊಂಡಿದ್ದಾರೆ. ಇಡೀ ಗ್ರಾಮದ ಎಲ್ಲ ಜಾನುವಾರುಗಳನ್ನು ಇದೇ ಐದಾರು ಮಂದಿ ಊರಾಚೆಗಿನ ಅಡವಿಗೆ ಮೇಯಿಸಲು ಕರೆದೊಯ್ಯುತ್ತಾರೆ.
ಮೇಯಿಸುವುದಕ್ಕಾಗಿ ರಾಸುಗಳನ್ನು 3-4 ಗುಂಪುಗಳಾಗಿ ಹಂಚಿಕೊಂಡಿರುವ ಯುವಕರು ಪ್ರತೀ ಹಸುವಿಗೆ ಮಾಸಿಕ 450 ರೂ. ನಿಗದಿ ಮಾಡಿದ್ದಾರೆ. ಒಬ್ಬ ಯುವಕ ಸುಮಾರು 200 ಹಸುಗಳನ್ನು ಮೇಯಿಸುತ್ತಾನೆ. ಹೀಗಾಗಿ ತಂಡದ ಪ್ರತಿಯೊಬ್ಬ ಯುವಕ ಮಾಸಿಕ ಸುಮಾರು 90 ಸಾವಿರ ರೂ. ಆದಾಯ ಗಳಿಸುತ್ತಿದ್ದಾನೆ.

Exit mobile version