ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಟೆಂಡರ್ ಆಹ್ವಾನಿಸಿ ಅನುಷ್ಠಾನಗೊಳಿಸುತ್ತಿರುವ ಮನೆಗಳ ಪೈಕಿ ಮುಕ್ತಾಯ ಹಂತದಲ್ಲಿರುವ 48,796 ಮನೆಗಳ ಪ್ರತಿ ಫಲಾನುಭವಿಗಳಿಂದ 1 ಲಕ್ಷ ರೂ. ಮಾತ್ರ ಸಂಗ್ರಹಿಸಿ ಉಳಿದ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸಲು ಸಂಪುಟ ತೀರ್ಮಾನಿಸಿದೆ.
ಇಂದು (ಡಿಸೆಂಬರ್ 21) ನಡೆದ ಮಹತ್ವದ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಎಚ್.ಕೆ. ಪಾಟೀಲ್ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಖಾನ್ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಮನೆ ಹಂಚುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಪಾವತಿಸಿ ಮನೆಯನ್ನು ಪಡೆಯಬಹುದು. ಇದು ಕಾಂಗ್ರೆಸ್ ಚುನಾವಣೆಗೆ ಮುನ್ನ ಘೋಷಿಸದೇ ಇರುವ ಆರನೇ ಗ್ಯಾರಂಟಿ ಎಂದು ಪರಿಗಣಿಸಬಹುದು ಎಂದು ಹೇಳಿದರು.
ಹೊಸ ಯೋಜನೆಯ ಪ್ರಕಾರ ರಾಜ್ಯ ಸರ್ಕಾರ 500 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಹಣ ಬಿಡುಗಡೆಗೆ ಒಪ್ಪಿದ್ದಾರೆ. ಈಗ ಮನೆ ಪಡೆಯುವ ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಕಟ್ಟಿದರೆ ಸಾಕು. ಕೇಂದ್ರ ಸರ್ಕಾರ ಒಂದುವರೆ ಲಕ್ಷವನ್ನು ಕೊಡುತ್ತದೆಯಾದರೂ ಈ ಮೊತ್ತವನ್ನು ಅದು ಜಿಎಸ್ಟಿ ಮೂಲಕ ಮರಳಿ ಪಡೆಯುತ್ತದೆ ಎಂದು ಜಮೀರ್ ಅಹಮ್ಮದ್ ಖಾನ್ ಹೇಳಿದರು.