ನವದೆಹಲಿ: ಜಾರ್ಖಂಡ್‌ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಮನೆಯಲ್ಲಿ ಪತ್ತೆಯಾದ 329 ಕೋಟಿ ರು.ನಗದನ್ನು ಪಾಳು ಬಂಗಲೆಯಲ್ಲಿ ಅಡಗಿಸಿ ಇಡಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಸಾಹು ಮನೆಯಲ್ಲಿ ಪತ್ತೆಯಾದ ವಸ್ತುಗಳ ಕುರಿತು ಗುರುವಾರ ಅಧಿಕೃತವಾಗಿ ಮಾಹಿತಿ ನೀಡಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ, ರಾಜಕೀಯ ನಂಟಿನ ವ್ಯಕ್ತಿಯೊಬ್ಬರ ಮನೆಯಲ್ಲಿ ಇತ್ತೀಚೆಗೆ ವಶಪಡಿಸಿಕೊಂಡ 351 ಕೋಟಿ ರು. ಪೈಕಿ, 329 ಕೋಟಿ ರು.ಗಳನ್ನು ಅವರಿಗೆ ಸೇರಿದ ಪಾಳು ಬಿದ್ದ ಇಲ್ಲವೇ ಖಾಲಿ ಕಟ್ಟಡಗಳಿಂದ ವಶಪಡಿಸಿಕೊಳ್ಳಲಾಗಿತ್ತು. ಯಾರಿಗೂ ಗೊತ್ತಾಗದೇ ಇರಲಿ ಎಂಬ ಕಾರಣಕ್ಕೆ ಒಡಿಶಾದ ಸಣ್ಣ ನಗರಗಳಾದ ಬೋಲಂಗೀರ್ ಜಿಲ್ಲೆಯಲ್ಲಿ ಮತ್ತು ಸಂಬಲ್ಪುರ ಜಿಲ್ಲೆಯ ಖೇತ್ರಜ್‌ಪುರ ಸೇರಿ ಇತರೆಡೆ ಖಾಲಿ ಕಟ್ಟಡ ಅಥವಾ ಸಾರ್ವಜನಿಕ ಪ್ರದೇಶಗಳಿಂದ ಮುಕ್ತವಾಗಿರುವ ಸ್ಥಳದಲ್ಲಿಯೇ ಹೆಚ್ಚಾಗಿ ಹಣವನ್ನು ಬಚ್ಚಿಡಲಾಗಿತ್ತು. ಇಲ್ಲಿ ದಾಳಿ ನಡೆಸಿದ ವೇಳೆ ಇಲಾಖೆಗೆ ಕಂತೆ ಕಂತೆ ನೋಟುಗಳು ಸಿಕ್ಕಿವೆ ಎಂದು ಸಿಬಿಡಿಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.