ಪ್ರಯಾಗರಾಜ್: 2025ರ ಕುಂಭಮೇಳದಲ್ಲಿ 40 ಕೋಟಿ ಯಾತ್ರಾರ್ಥಿಗಳು ಪಾಲ್ಗೊಳುವ ನಿರೀಕ್ಷೆಯಿದೆ. 2019ರಲ್ಲಿ ನಡೆದ ಕುಂಭಮೇಳದಲ್ಲಿ 25 ಕೋಟಿ ಮಂದಿ ಪಾಲ್ಗೊಂಡಿದ್ದು, ಈ ಬಾರಿ ಅದಕ್ಕಿಂತ ಹೆಚ್ಚಿನ ಭಕ್ತರು ಈ ಬಾರಿ ಮೇಳದಲ್ಲಿ ಪಾಲು ಪಡೆಯಲಿದ್ದಾರೆ. ಈ ಕುರಿತ ತಯಾರಿಗಳ ಕುರಿತು ವಿವರಿಸಿರುವ ಮೇಳದ ಅಧಿಕಾರಿ ವಿಜಯ್ ಕಿರಣ್ ಆನಂದ್, ಮಹಾ ಕುಂಭವನ್ನು 25 ಸೆಕ್ಟರ್‌ಗಳಾಗಿ ವಿಂಗಡಿಸಲಾಗುವುದು, ಪ್ರತಿ ಸೆಕ್ಟರ್‌ನಲ್ಲಿ ಪೊಲೀಸ್ ಠಾಣೆ ಸ್ಥಾಪಿಸಲಾಗುವುದು. ಅಲ್ಲದೆ 100 ಕ್ಕೂ ಹೆಚ್ಚು ಪೊಲೀಸ್ ಔಟ್‌ಪೋಸ್ಟ್‌ಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದ್ದಾರೆ.
2019 ರಲ್ಲಿ ಅಧಿಕಾರಿಗಳು ಗಂಗಾ ಮತ್ತು ಯಮುನಾ ನದಿಗಳಿಗೆ ಅಡ್ಡಲಾಗಿ 22 ಪಾಂಟೂನ್ ಸೇತುವೆಗಳನ್ನು ಮಾಡಿದ್ದರು. 2025 ರಲ್ಲಿ ಈ ಸಂಖ್ಯೆ 27 ಕ್ಕೆ ಏರುತ್ತದೆ ಎಂದು ಆನಂದ್ ತಿಳಿಸಿದ್ದಾರೆ. 25 ಸೆಕ್ಟರ್‌ಗಳಲ್ಲಿ ತಲಾಒಂದು ಅಗ್ನಿಶಾಮಕ ಠಾಣೆ ಸ್ಥಾಪಿಸಲಾಗುವುದು. ಮೇಳದ ಪ್ರದೇಶದ ಬಳಿ ಮತ್ತು ನಗರದ ಹೊರವಲಯದಲ್ಲಿ ಸುಮಾರು ನಾಲ್ಕು ಲಕ್ಷ ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಕಿರಣ್ ತಿಳಿಸಿದ್ದಾರೆ. ವಿಶಾಲವಾದ ಮೇಳ ಪ್ರದೇಶಕ್ಕೆ ಬಹು ಪ್ರವೇಶ ಮತ್ತು ನಿರ್ಗಮನಗಳಿರುತ್ತವೆ. ಮಹಾ ಕುಂಭ 2025 ಪೌಶ್ ಪೂರ್ಣಿಮಾದಿಂದ (ಜನವರಿ 13) ಪ್ರಾರಂಭವಾಗುತ್ತದೆ, ನಂತರ ಜನವರಿ 14 ರಂದು ಮಕರ ಸಂಕ್ರಾಂತಿ, ಜನವರಿ 29 ರಂದು ಮೌನಿ ಅಮವಾಸ್ಯೆ, ಫೆಬ್ರವರಿ 3 ರಂದು ಬಸಂತ್ ಪಂಚಮಿ, ಫೆಬ್ರವರಿ 12 ರಂದು ಮಾಘಿ ಪೂರ್ಣಿಮೆ ಮತ್ತು ಫೆಬ್ರವರಿ 26 ರಂದು ಮಹಾ ಶಿವರಾತ್ರಿ ನಡೆಯಲಿದೆ. ದೇಶದ 13 ಅಖಾರಾಗಳ ಮೂರು ಶಾಹಿ ಸ್ನಾನ ಜನವರಿ 14 ರ ಮಕರ ಸಂಕ್ರಮಣದಂದು ನಡೆಯಲಿದೆ.