ಮುಂಬಯಿ: ನ್ಯೂ ಮಿಲೆನಿಯಂನಲ್ಲಿ ಬೈಕ್ ಪ್ರಿಯರ ಕ್ರೇಝ್ ಗೆ ಕಿಚ್ಚು ಹಚ್ಚಿದ್ದ ಕರಿಝ್ಮಾ (Karizma) ಇದೀಗ ಹೊಸ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.
ಇದೀಗ ಕರಿಝ್ಮಾ XMR 210 (Karizma XMR 210) ಹೊಸ ರೂಪದಲ್ಲಿ ಮಾರುಕಟ್ಟೆಗೆ ಬಂದಿದ್ದು ಹತ್ತು ಹಲವು ವಿಶೇಷತೆಗಳೊಂದಿಗೆ ಹೀರೋ ಮೋಟಾರ್ ಕಾರ್ಪ್ (Hero Motor Corp) ಈ ಸ್ಟೈಲಿಷ್ ಬೈಕನ್ನು ಆ.30ರಂದು ಮಾರುಕಟ್ಟೆಗೆ ರಿಲೀಸ್ ಮಾಡಿದೆ.
ಸದ್ಯಕ್ಕೆ ಈ ಬೈಕಿನ ಬುಕ್ಕಿಂಗ್ ಪ್ರಾರಂಭಗೊಂಡಿದ್ದು ಕೆಲವೇ ದಿನಗಳಲ್ಲಿ ಬೈಕ್ ಪ್ರಿಯರು ಕರಿಝ್ಮಾ XMR 210 ಬೈಕನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಬೈಕಿನ ಎಕ್ಸ್-ಶೋರೂಂ ಬೆಲೆ 1.73 ಲಕ್ಷ ರೂಪಾಯಿಗಳಾಗಿದ್ದು ಈ ಬೆಲೆ ಮುಂಬರುವ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ.
ಹೀರೋ ಮೋಟಾರ್ ಕಾರ್ಪ್ ನ ಅಫಿಷಿಯಲ್ ವೆಬ್ ಸೈಟ್ ಗೆ ಭೇಟಿ ಕೊಟ್ಟು ಆಸಕ್ತರು ಈ ಬೈಕನ್ನು ಬುಕ್ ಮಾಡಿಕೊಳ್ಳಬಹುದು.
2003ರಲ್ಲಿ ಕರಿಝ್ಮಾ ಮಾರುಕಟ್ಟೆಗೆ ರಿ ಎಂಟ್ರಿ ಕೊಟ್ಟಿದ್ದ ಸಂದರ್ಭದಲ್ಲಿಇದ್ದ ಸ್ಟೈಲಿಷ್ ಫೀಚರ್ ಗಳನ್ನು ಉಳಿಸಿಕೊಂಡು ಈಗಿನ ಅಗತ್ಯತೆಗಳಿಗನುಗುಣವಾಗಿ ಹೊಸತನಗಳನ್ನು ಅಳವಡಿಸಿಕೊಂಡು ಕರಿಝ್ಮಾ ಎಕ್ಸ್.ಎಂ.ಆರ್ ಭರ್ಜರಿ ರಿ ಎಂಟ್ರಿ ಕೊಟ್ಟಿದೆ.
LED ಡೇ ಟೈಮ್ ಲೈಟ್ ಜೊತೆಗೆ ಪ್ರಖರ LED ಹೆಡ್ ಲ್ಯಾಂಪ್, LED ಇಂಡಿಕೇಟರ್ಸ್ ಮತ್ತು ಟೈಲ್ ಲ್ಯಾಂಪ್ ಹೊಸ ಅಳವಡಿಕೆಯಾಗಿದೆ. ಆಕರ್ಷಕ ಅಡ್ಜಸ್ಟೇಬಲ್ ಫ್ರಂಟ್ ವಿಂಡ್ ಗಾರ್ಡ್ ಮೂಲಕ ಈ ಬೈಕಿಗೊಂದು ಸ್ಪೋರ್ಟಿವ್ ಲುಕ್ ಲಭಿಸಿದೆ. ಆಕರ್ಷಕ ವಿನ್ಯಾಸದ ಬಲಿಷ್ಠ ಇಂಧನ ಟ್ಯಾಂಕ್ ಈ ಬೈಕಿನ ಇನ್ನೊಂದು ವಿಶೇಷತೆಯಾಗಿದೆ. ಇದು ಬೈಕಿನ ಏರೋ ಡೈನಾಮಿಕ್ ಸಾಮರ್ಥ್ಯಕ್ಕೆ ಇನ್ನಷ್ಟು ಬಲ ನೀಡಲಿದೆ.
ಹಿಂಬದಿ ಸವಾರರ ಸೀಟ್ ಎತ್ತರದಲ್ಲಿದ್ದು ಸ್ಲಿಟ್ ಸೀಟ್ ಮಾದರಿಯನ್ನು ಈ ಬೈಕ್ ಹೊಂದಿದೆ.
ಕರಿಝ್ಮಾ XMR 210 ಕಲರ್ ಫುಲ್ LED ಡಿಜಿಟಲ್ ಡಿಸ್ಪ್ಲೇ ಹೊಂದಿದ್ದು, ಇದರಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಈ ಹೊಸ ಮಾದರಿಯ ಬೈಕ್ ಐಕಾನಿಕ್ ಯೆಲ್ಲೋ, ಮ್ಯಾಟ್ ರೆಡ್, ಫ್ಯಾಂಟಮ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ.
210CC ಸಾಮರ್ಥ್ಯದ ಎಂಜಿನ್, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲಿಂಗ್ ಎಂಜಿನ್ ಇದರಲ್ಲಿದ್ದು, 9250 ಆರ್.ಪಿ.ಎಂನಲ್ಲಿ 25 ಬಿ.ಹೆಚ್.ಪಿ ಗರಿಷ್ಠ ಪವರ್ ನೀಡಲಿದೆ. ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಸಿಸ್ಟಮ್ ನೊಂದಿಗೆ 6-ಸ್ಪೀಡ್ ಗೇರ್ ಈ ಬೈಕಿನ ಲುಕ್ ಮತ್ತು ವೇಗಕ್ಕೊಂದು ಹೊಸ ಆಯಾಮವನ್ನು ನೀಡಿದೆ.
ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಬದಿಯಲ್ಲಿ ಪ್ರಿ-ಲೋಡೆಡ್ ಅಡ್ಜೆಸ್ಟೇಬಲ್ ಮೋನೋಶಾಕ್ ಅಬ್ಸಾರ್ಬರ್ ಇದೆ. ಎದುರು ಮತ್ತು ಹಿಂಬದಿ ಡಿಸ್ಕ್ ಬ್ರೇಕ್ ಸೌಲಭ್ಯವಿದ್ದು, ಡ್ಯುಯಲ್ ಚಾನಲ್ ಎಬಿಸ್ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ.
ಒಟ್ಟಿನಲ್ಲಿ ಬೈಕ್ ಪ್ರಿಯರಿಗೆ ವೇಗದ ಅನುಭವದ ಜೊತೆಗೆ ರಸ್ತೆ ಸುರಕ್ಷತೆಯ ಎಲ್ಲಾ ಆಧುನಿಕ ತಂತ್ರಜ್ಞಾನ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವ ಮಾದರಿಯಲ್ಲಿ ಕರಿಝ್ಮಾ ಎಕ್ಸ್.ಎಂ.ಆರ್ ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.