ಮಂಗಳೂರು: ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರಿಂದ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸುಮಾರು ಹನ್ನೊಂದು ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದ ಮೂಲಕ ಆಗಮಿಸಿದ ಓರ್ವ ಪುರುಷ ಹಾಗೂ ಮಹಿಲೆಯನ್ನು ತಪಾಸಣೆ ನಡೆಸಿದ ವೇಳೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಬುಧವಾರ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಓರ್ವ ಪ್ರಯಾಣಿಕ ಮುಖಕ್ಕೆ ಮಾಸ್ಕ್ ಧರಿಸಿದ್ದು, ಆತನನ್ನು ತಪಾಸಣೆ ನಡೆಸಿದಾಗ ಆತನ ಕೆನ್ನೆಯ ಭಾಗ ಊದಿಕೊಂಡಂತೆ ಭಾಸವಾಗಿದ್ದು ಈ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆ ನಡೆಸಿದಾಗ ಬಾಯಿಯ ಒಳಗೆ ಎರಡು ಚಿನ್ನದ ತುಂಡುಗಳನ್ನು ಬಚ್ಚಿಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.
ಇದೆ ವೇಳೆ ಮಹಿಳಾ ಪ್ರಯಾಣಿಕರೊಬ್ಬರು ತನ್ನ ತಲೆಕೂದಲಿಗೆ ಹಾಕಿಕೊಂಡಿದ್ದ ಬ್ಯಾಂಡ್ ನಲ್ಲಿ ರೇಡಿಯಂ ಲೇಪಿತ ಮಣಿಯಂತಹ ಹೇರ್ ಬ್ಯಾಂಡ್ ಗಳು ಪತ್ತೆಯಾಗಿದೆ ಇದನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಅದರಲ್ಲೂ ಚಿನ್ನವನ್ನು ಕರಗಿಸಿ ಲೇಪನ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರ ಬಳಿ ಒಟ್ಟು 11 ಲಕ್ಷ ಮೌಲ್ಯದ 191 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.