ಬೆಂಗಳೂರು: ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆಯನ್ನು ಸರ್ಕಾರ ಆರಂಭಿಸಿದ ಬಳಿಕ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಬಸ್‌ಗಳಲ್ಲಿ ಸೀಟ್‌ಗಾಗಿ ಜಗಳ, ಖ್ಯಾತೆ, ದಿನನಿತ್ಯವೆಂಬಂತೆ ನಡೆಯುತ್ತಿದೆ. ಈ ಕಾರಣದಿಂದ ಬಸ್ ಗಳ ಸಂಖ್ಯೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು, ಹೊಸ ಬಸ್ ಖರೀದಿಗೆ ಯೋಜನೆ ರೂಪಿಸಿದೆ.
ನಾಲ್ಕೂ ಸಾರಿಗೆ ನಿಗಮಕ್ಕೆ ನಾಲ್ಕು ಸಾವಿರ ಹೊಸ ಬಸ್ ಖರೀದಿಗೆ ಚಿಂತನೆ ನಡೆದಿದೆ. ಕೆಎಸ್ಆರ್ಟಿಸಿಯಲ್ಲಿ ಈಗಾಗಲೇ 8116 ಬಸ್ಸುಗಳಿವೆ. ಬಿಎಂಟಿಸಿಯಲ್ಲಿ 6688, ವಾಯುವ್ಯ ಸಾರಿಗೆಯಲ್ಲಿ 4858 ಬಸ್ಸುಗಳು ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 4327 ಬಸ್ಗಳಿವೆ. ಅಂದ್ರೆ ಒಟ್ಟು ನಾಲ್ಕು ಸಾರಿಗೆ ನಿಗಮದಿಂದ 23,986 ಬಸ್ಸುಗಳಿವೆ. ಆದರೆ ರಾಜ್ಯದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಇಷ್ಟು ಬಸ್ಸುಗಳು ಸಾಲುವುದಿಲ್ಲ.
ಅಲ್ಲದೆ ಈಗಾಗಲೇ ನಾಲ್ಕು ನಿಯಮಗಳಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚು ಕಿಮೀ ಸಂಚಾರ ಮಾಡಿರುವ ಬಸ್ಸುಗಳಿವೆ. ಆರ್ಟಿಓ ರೂಲ್ಸ್ ಪ್ರಕಾರ ಬಸ್ಸುಗಳು 8 ರಿಂದ 10 ಲಕ್ಷ ಕಿಮೀ ಮಾತ್ರ ಸಂಚಾರ ಮಾಡಬೇಕು. ಅದರ ಮೇಲೆ ಮಾಡಿದ್ರೆ ಅದನ್ನು ಗುಜರಿಗೆ ಹಾಕಬೇಕು. ಆದರೆ ನಾಲ್ಕು ನಿಗಮಗಳಲ್ಲಿ ಸುಮಾರು 3 ರಿಂದ 4 ಸಾವಿರ ಹಳೆಯ ಬಸ್ಸುಗಳಿದ್ದು ಅವುಗಳನ್ನು ಗುಜರಿಗೆ ಹಾಕಿ ಮತ್ತೆ ಹೊಸದಾಗಿ ನಾಲ್ಕು ಸಾವಿರ ಬಸ್ಸುಗಳನ್ನು ಸೇರಿಸಲು ತಯಾರಿ ನಡೆದಿದೆ.
Photo credit – Facebook