ಮಂಗಳೂರು: ಎಪ್ರಿಲ್ 14ರಂದು ಮಂಗಳೂರಿನಲ್ಲಿ ಆಯೋಜಿಸಿದ್ದ ಪ್ರಧಾನಿ ಮೋದಿಯವರ ಬೃಹತ್ ಸಮಾವೇಶವನ್ನು ಕೊನೆಕ್ಷಣದಲ್ಲಿ ರದ್ದು ಪಡಿಸಲಾಗಿದೆ. ಅದರ ಬದಲು ಮಂಗಳೂರು ನಗರದಲ್ಲಿ ಕೇವಲ ರೋಡ್ ಶೋ ನಡೆಸುವುದಕ್ಕೆ ಸಿದ್ಧತೆ ನಡೆಸಲಾಗಿದೆ.
ಕುಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವುದಕ್ಕೆ ಸಿದ್ಧತೆ ನಡೆಸಲಾಗಿತ್ತು. ಇಂದು ಬೆಳಗ್ಗೆ ಮೈದಾನದಲ್ಲಿ ಚಪ್ಪರ ಮುಹೂರ್ತವನ್ನೂ ನಡೆಸಲಾಗಿತ್ತು. ಜರ್ಮನ್ ನಿರ್ಮಿತ ಬೃಹತ್ ಪೆಂಡಾಲ್ ಹಾಕಲು ಸಿದ್ಧತೆ ನಡೆಸಲಾಗಿತ್ತು. ಇದರ ಬೆನ್ನಲ್ಲೇ ತಾಂತ್ರಿಕ ಕಾರಣದಿಂದಾಗಿ ಬೃಹತ್ ಸಮಾವೇಶ ನಡೆಸುವುದನ್ನು ರದ್ದು ಪಡಿಸಲಾಗಿದೆ.
ಸಮಾವೇಶ ನಡೆಸುವ ಬದಲು ಕೇವಲ ರೋಡ್ ಶೋ ನಡೆಸುವುದಕ್ಕೆ ಆದ್ಯತೆ ನೀಡಲಾಗಿದೆ. ಮಂಗಳೂರಿನಲ್ಲಿ ರೋಡ್ ಶೋ ನಡೆಸುವುದಕ್ಕೆ ಎಸ್ ಪಿಜಿ ಭದ್ರತೆ ಪರಿಶೀಲಿಸಿದ ನಂತರವೇ ಯಾವ ರಸ್ತೆಯಲ್ಲಿ ರೋಡ್ ಶೋ ನಡೆಸುವುದೆಂದು ನಿರ್ಧಾರ ಮಾಡಬೇಕಾಗುತ್ತದೆ. ಏರ್ಪೋರ್ಟ್ ರಸ್ತೆಯಲ್ಲೇ ಮಂಗಳೂರು ನಗರದ ವರೆಗೆ ರೋಡ್ ಶೋ ನಡೆಸುತ್ತಾರೆಯೇ ಅಥವಾ ಮಂಗಳೂರು ನಗರದ ಒಳಭಾಗದ ನೆಹರು ಮೈದಾನದ ಆಸುಪಾಸಿನಲ್ಲಿ ರೋಡ್ ಶೋ ನಡೆಸುತ್ತಾರೆಯೇ ಅನ್ನುವುದು ನಿರ್ಧಾರ ಆಗಿಲ್ಲ.
ಭದ್ರತೆಯ ಕಾರಣಕ್ಕೆ ಪ್ರಧಾನಿ ಮೋದಿ ಆಯಕಟ್ಟಿನ ರಸ್ತೆಗಳಲ್ಲಿ ಬರುವುದಕ್ಕೆ ಎಸ್ ಪಿಜಿ ಅವಕಾಶ ನೀಡುವುದಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ರೋಡ್ ಶೋ ನಡೆಸುವುದಕ್ಕೂ ಅವಕಾಶ ಇರುವುದಿಲ್ಲ. ಹೀಗಾಗಿ ರೋಡ್ ಶೋವನ್ನು ಯಾವ ರಸ್ತೆಯಲ್ಲಿ ಮತ್ತು ಎಷ್ಟು ಹೊತ್ತಿಗೆ ಮಾಡಲಿದ್ದಾರೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಸದ್ಯಕ್ಕೆ ಕುಳೂರು ಮೈದಾನದಲ್ಲಿ ನಡೆಯುವ ಸಮಾವೇಶ ರದ್ದುಪಡಿಸಲಾಗಿದೆ ಎನ್ನುವ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.