2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗ ಇಷ್ಟೊಂದು ಯಶಸ್ಸು ಸಾಧಿಸುತ್ತದೆ ಎಂದು ಯಾರೂ ಊಹಿಸರಲಿಲ್ಲ. ಭಾರತದಲ್ಲಿ ಐಪಿಎಲ್ ಆರಂಭವಾಗಿ 17 ವರ್ಷಗಳೇ ಕಳೆದಿವೆ. ಈ ವರ್ಷಗಳಲ್ಲಿ ಈ ಲೀಗ್ ತಾನೊಂದೆ ಬೆಳೆಯದೇ, ದೇಶದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಪೂರಕವಾಗಿದೆ. ಐಪಿಎಲ್‌ನಲ್ಲಿ ಆಡಿದರೆ ನೇಮ್ ಫೇಮ್ ಸಿಗುವುದು ಫಿಕ್ಸ್..
ಐಪಿಎಲ್ ಆರಂಭವಾದ ತಮ್ಮ ಕರಿಯರ ಆರಂಭಿಸಿದ ಕ್ರಿಕೆಟ್ ಆಟಗಾರರು ಇಂದು ಸೂಪರ್ ಸ್ಟಾರ್ ರೀತಿ ಮೆರೆಯುತ್ತಿದ್ದಾರೆ. 17 ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಿದ ಆಟಗಾರರು ಹಲವು ದಾಖಲೆಗಳನ್ನು ಮಾಡಿದ್ದು, ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅದೆಷ್ಟೋ ದಾಖಲೆಗಳು ಸೇರಿಕೊಂಡಿವೆ. ಈ ಸಾಲಿಗೆ ಸೋಮವಾರ ಮತ್ತೊಂದು ದಾಖಲೆ ಸೇರಿಕೊಳ್ಳಲಿದೆ.
ಅಶ್ವಿನ್ @ 200
ಮುಂಬೈನ ವಾಂಖೇಡೆ ಅಂಗಳದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ರಾಜಸ್ಥಾನದ ಬೌಲರ್ ಅಂಗಳಕ್ಕೆ ಇಳಿಯುತ್ತಿದ್ದಂತೆ ಐಪಿಎಲ್ ಇತಿಹಾಸದ ಪುಟದಲ್ಲಿ ತಮ್ಮ ಸ್ಥಾನವನ್ನು ಹೊಂದಲಿದ್ದಾರೆ. ರಾಜಸ್ಥಾನ ತಂಡದ ಸ್ಪಿನ್ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿರುವ ಆರ್.ಅಶ್ವಿನ್ ಅವರಿಗೆ 200ನೇ ಐಪಿಎಲ್ ಪಂದ್ಯವಾಗಲಿದೆ. ಮುಂಬೈ ಅಂಗಳದಲ್ಲಿ ಅಶ್ವಿನ್ ತಮ್ಮ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಿಂದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೆರವಾಗಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದಲೇ ಎದುರಾಳಿಗಳ ನಿದ್ದೆಗೆಡಿಸಿರುವ ಇವರು ಐಪಿಎಲ್‌ನ ಶ್ರೇಷ್ಠ ಪ್ಲೇಯರ್‌ಗಳಲ್ಲಿ ಒಬ್ಬರು. ಇಲ್ಲಿಯವರೆಗೆ ಅಶ್ವಿನ್ 199 ಪಂದ್ಯಗಳನ್ನು ಆಡಿದ್ದು 743 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಸಹ ಸೇರಿದೆ. ಒಟ್ಟರೆ 56 ಬೌಂಡರಿ, 27 ಸಿಕ್ಸರ್ ಸಿಡಿಸಿರುವ ಇವರು ತಂಡಕ್ಕೆ ಅಗತ್ಯವಿದ್ದಾಗ ಬ್ಯಾಟಿಂಗ್‌ನಲ್ಲೂ ಕಾಣಿಕೆ ನೀಡಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 172 ವಿಕೆಟ್ ಪಡೆದು ಬೀಗಿದ್ದಾರೆ.
ಗರಿಷ್ಠ ಐಪಿಎಲ್ ಪಂದ್ಯ ಆಡಿದ್ದು ಯಾರು? ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಕೀರ್ತಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಲ್ಲುತ್ತದೆ. ಇವರು 223 ಪಂದ್ಯಗಳನ್ನು ಸಿಎಸ್‌ಕೆ ತಂಡದ ಪರ ಆಡಿದ್ದು, 30 ಪಂದ್ಯಗಳನ್ನು ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದಾರೆ. ಒಟ್ಟು ಇವರು ಶ್ರೀಮಂತ ಲೀಗ್‌ನಲ್ಲಿ 253 ಪಂದ್ಯ ಆಡಿದ್ದಾರೆ.
ವಿರಾಟ್‌ಗೂ ಪಟ್ಟಿಯಲ್ಲಿ ಸ್ಥಾನ
ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರೂ 245 ಪಂದ್ಯಗಳನ್ನು ಆಡಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿರುವ ವಿರಾಟ್ ಕೊಹ್ಲಿ 240 ಪಂದ್ಯಗಳನ್ನು ಆಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜಾ 229, ಪಂಜಾಬ್ ಕಿಂಗ್ಸ್ ಶಿಖರ್ ಧವನ್ 220, ಮಾಜಿ ಆಟಗಾರ ಸುರೇಶ್ ರೈನಾ ಹಾಗೂ ರಾಬಿನ್ ಉತ್ತಪ್ಪ ತಲಾ 205, ಅಂಬಟಿ ರಾಯುಡು 204 ಪಂದ್ಯಗಳನ್ನು ಆಡಿದ್ದಾರೆ.